ಟೆಸ್ಟ್’ನಿಂದಲೂ ಅಶ್ವಿನ್-ಜಡ್ಡು ಔಟ್; ಮಣಿಕಟ್ಟು ಸ್ಪಿನ್ನರ್ಸ್’ಗೆ ಚಾನ್ಸ್

First Published Jul 14, 2018, 1:51 PM IST
Highlights

ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರಗಳಾಗಿರುವ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್‌ರನ್ನು ಟೆಸ್ಟ್‌ನಲ್ಲೂ ಆಡಿಸಬೇಕು ಎನಿಸುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 

ನಾಟಿಂಗ್‌ಹ್ಯಾಮ್[ಜು.14]: ಕುಲ್ದೀಪ್ ಹಾಗೂ ಚಾಹಲ್ ಆಗಮನದಿಂದ ಈಗಾಗಲೇ ಸೀಮಿತ ಓವರ್‌ಗಳ ತಂಡದಿಂದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ತಂಡದಿಂದ ಹೊರಬಿದ್ದ ಇಬ್ಬರು ಮತ್ತೆ ಅವಕಾಶ ಪಡೆದಿಲ್ಲ. ಕಾರಣ, ಕುಲ್ದೀಪ್ ಹಾಗೂ ಚಾಹಲ್ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ.

ಇದೀಗ ನಾಯಕ ಕೊಹ್ಲಿ ಟೆಸ್ಟ್ ತಂಡದಲ್ಲೂ ಕುಲ್ದೀಪ್, ಚಾಹಲ್’ರನ್ನು ಆಡಿಸುವ ಮನಸಾಗುತ್ತಿದೆ ಎಂದಿರುವುದು ಭಾರತದ ಹಿರಿಯ ಸ್ಪಿನ್ನರ್‌ಗಳಿಗೆ ಆತಂಕ ಮೂಡಿಸಿದೆ. ಅಶ್ವಿನ್ ಹಾಗೂ ಜಡೇಜಾ ಕಳೆದ ಕೆಲ ವರ್ಷಗಳಿಂದ ಭಾರತ ಟೆಸ್ಟ್ ತಂಡದ ಕಾಯಂ ಸದಸ್ಯರಾಗಿದ್ದು, ಸದ್ಯ ತಂಡದಿಂದ ಹೊರಬೀಳುವ ಭೀತಿ ಎದುರಿಸುತ್ತಿದ್ದಾರೆ. 

ಮಣಿಕಟ್ಟು ಸ್ಪಿನ್ನರ್ಸ್’ಗೆ ಚಾನ್ಸ್:

ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರಗಳಾಗಿರುವ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್‌ರನ್ನು ಟೆಸ್ಟ್‌ನಲ್ಲೂ ಆಡಿಸಬೇಕು ಎನಿಸುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಟಿ20 ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಮಣಿಕಟ್ಟು ಸ್ಪಿನ್ನರ್‌ಗಳು, ಏಕದಿನ ಸರಣಿಯಲ್ಲೂ ಚಮತ್ಕಾರ ಮುಂದುವರಿಸಿದ್ದಾರೆ. ಏಕದಿನ ಸರಣಿ ಬಳಿಕ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಈ ಇಬ್ಬರನ್ನೇ ಮುಂದುವರಿಸಲು ಭಾರತ ತಂಡದ ಆಡಳಿತ ಗಂಭೀರ ಚಿಂತನೆ ನಡೆಸಿದೆ. ಕುಲ್ದೀಪ್ ಈಗಾಗಲೇ ಭಾರತ ಪರ 2 ಟೆಸ್ಟ್ ಆಡಿದ್ದಾರೆ, ಆದರೆ ಚಾಹಲ್‌ಗಿನ್ನೂ ಟೆಸ್ಟ್ ಕ್ಯಾಪ್ ದೊರೆತಿಲ್ಲ.

ಗುರುವಾರ ಮೊದಲ ಏಕದಿನ ಪಂದ್ಯ ಗೆದ್ದ ಬಳಿಕ ಮಾತನಾಡಿದ ಕೊಹ್ಲಿ, ‘ಟೆಸ್ಟ್ ಸರಣಿಗಾಗಿ ತಂಡದ ಆಯ್ಕೆಯಲ್ಲಿ ಏನು ಬೇಕಿದ್ದರೂ ಆಗಬಹುದು. ಕೆಲ ಅಚ್ಚರಿಗಳ ನಿರೀಕ್ಷೆ ಇದೆ. ಕುಲ್ದೀಪ್ ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಚಾಹಲ್ ಸಹ ಪೈಪೋಟಿಯಲ್ಲಿದ್ದಾರೆ. ಇಂಗ್ಲೆಂಡ್ ಆಟಗಾರರು ಪರದಾಡುತ್ತಿರುವ ರೀತಿ ನೋಡಿದರೆ, ಈ ಇಬ್ಬರನ್ನು ಆಡಿಸುವುದು ಸೂಕ್ತ ಎನಿಸುತ್ತಿದೆ’ ಎಂದರು.

‘ಮೊದಲು ಏಕದಿನ ಸರಣಿಯಲ್ಲಿ ಬಾಕಿ ಇರುವ 2 ಪಂದ್ಯಗಳ ಮೇಲೆ ಗಮನ ಹರಿಸುತ್ತೇವೆ. ಪ್ರಮುಖವಾಗಿ 2ನೇ ಪಂದ್ಯ ಗೆಲ್ಲುವುದು ನಮ್ಮ ಸದ್ಯದ ಗುರಿಯಾಗಿದೆ’ ಎಂದು ವಿರಾಟ್ ಹೇಳಿದ್ದಾರೆ. ಟಿ20ಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕುಲ್ದೀಪ್, ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಮಗ್ಗಲ ಮುಳ್ಳಾಗಿದ್ದರು. 6 ಬ್ಯಾಟ್ಸ್‌ಮನ್‌ಗಳು ಕುಲ್ದೀಪ್ ಸ್ಪಿನ್ ಮೋಡಿಗೆ ಉತ್ತರಿಸಲಾಗದೆ ಪೆವಿಲಿಯನ್ ಹಾದಿ ಹಿಡಿದಿದ್ದರು.

click me!