
ನವದೆಹಲಿ(ನ.03): ಅಂತರಾಷ್ಟ್ರೀಯ ಕ್ರಿಕೆಟ್'ನಿಂದ ಬುಧವಾರಷ್ಟೇ ನಿವೃತ್ತಿ ಪಡೆದ ವೇಗದ ಬೌಲರ್ ಆಶಿಶ್ ನೆಹ್ರಾ, ಆಯ್ಕೆಗಾರರಿಗೆ ಹೆದರಿ ತಾವು ವಿದಾಯ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ನಾನು ಯಾವ ಆಯ್ಕೆಗಾರರನ್ನು ಕೇಳಿ ಕ್ರಿಕೆಟ್ ಆಡಲು ಆರಂಭಿಸಲಿಲ್ಲ. ಅದೇ ರೀತಿ ನಿವೃತ್ತಿ ಪಡೆಯುವಾಗಲೂ ಯಾರ ಅನುಮತಿಯೂ ನನಗೆ ಬೇಕಿಲ್ಲ’ ಎಂದು ನೆಹ್ರಾ, ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದ ಬಳಿಕ ಉತ್ತರಿಸಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಅವರ ಹೇಳಿಕೆಗೆ ನೆಹ್ರಾ, ಬುಧವಾರ ಪ್ರತಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಇತ್ತೀಚೆಗಷ್ಟೇ ಪ್ರಸಾದ್, ನ್ಯೂಜಿಲೆಂಡ್ ಟಿ20 ಸರಣಿಯಿಂದ ಮುಂದಕ್ಕೆ ನೆಹ್ರಾಗೆ ಭಾರತ ತಂಡದಲ್ಲಿ ಅವಕಾಶವಿಲ್ಲ ಎಂದು ತಿಳಿಸಲಾಗಿದೆ’ ಎಂದು ಹೇಳಿದ್ದರು.
‘ಪ್ರಸಾದ್ ಹೇಳಿದ್ದನ್ನು ನಾನು ಕೇಳಿದ್ದೇನೆ. ನನಗೆ ಗೊತ್ತಿಲ್ಲ. ಆಯ್ಕೆ ಸಮಿತಿ ನನ್ನ ಬಳಿ ಏನನ್ನೂ ಮಾತನಾಡಿಲ್ಲ ರಾಂಚಿಯಲ್ಲಿ ವಿರಾಟ್ ಕೊಹ್ಲಿಗೆ ನಾನು ನಿವೃತ್ತಿ ಪಡೆಯಲು ನಿರ್ಧರಿಸಿರುವುದಾಗಿ ಹೇಳಿದೆ. ಅದಕ್ಕವರು ಐಪಿಎಲ್'ನಲ್ಲಾದರೂ ಮುಂದುವರಿಯಬಹುದಲ್ಲಾ, ಕೋಚ್ ಹಾಗೂ ಆಟಗಾರನಾಗಿ ಆಡಬಹುದು ಎಂದು ಸಲಹೆ ನೀಡಿದರು. ಆದರೆ ನಾನು ಪೂರ್ಣಪ್ರಮಾಣದಲ್ಲಿ ನಿವೃತ್ತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದೆ’ ಎಂದು ನೆಹ್ರಾ ಹೇಳಿದರು.
ಜತೆಗೆ ವಿದಾಯದ ಪಂದ್ಯಕ್ಕಾಗಿ ತಾವು ಮನವಿ ಮಾಡಿಲ್ಲ ಎಂದು ಸಹ ನೆಹ್ರಾ ಸ್ಪಷ್ಟಪಡಿಸಿದರು. ‘ನನ್ನ ತವರಿನಲ್ಲಿ ಕೊನೆ ಪಂದ್ಯವಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ’ ಎಂದು ನೆಹ್ರಾ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.