ಸ್ಪಾಟ್ ಫಿಕ್ಸಿಂಗ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರೀಶಾಂತ್

By Suvarna Web DeskFirst Published Nov 3, 2017, 12:58 PM IST
Highlights

‘ನಾನು ಯಾರ ಹೆಸರನ್ನೂ ಬಹಿರಂಗಗೊಳಿಸುವುದಿಲ್ಲ. ಒಂದೊಮ್ಮೆ ಬಹಿರಂಗಗೊಳಿಸಿದರೆ ನನ್ನ ಹಾಗೂ ನನ್ನ ಕುಟುಂಬದ ಮೇಲಾಗುವ ಪರಿಣಾಮದ ಬಗ್ಗೆ ಅರಿವಿದೆ. ಆದರೆ, ಬಿಸಿಸಿಐನ ಈ ಇಬ್ಬಗೆ ನೀತಿಯನ್ನು ಖಂಡಿಸುತ್ತೇನೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

ಕೊಚ್ಚಿ(ನ.03): ಐಪಿಎಲ್ ಟಿ20 ಟೂರ್ನಿ ವೇಳೆ ಮ್ಯಾಚ್ ಫಿಕ್ಸಿಂಗ್'ನಲ್ಲಿ ತೊಡಗಿದ್ದ ಹಲವರ ಹೆಸರನ್ನು ಬಿಸಿಸಿಐ ಬಹಿರಂಗಗೊಳಿಸಿಲ್ಲ. ಅವರು ಇಂದಿಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದಾರೆ ಎಂದು ವೇಗಿ ಶ್ರೀಶಾಂತ್ ಗಂಭೀರ ಆರೋಪ ಮಾಡಿದ್ದಾರೆ.

‘ಕನ್ನಡಪ್ರಭ-ಸುವರ್ಣ ನ್ಯೂಸ್' ಸೋದರ ಸಂಸ್ಥೆ ‘ರಿಪಬ್ಲಿಕ್ ಟಿವಿ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಶ್ರೀಶಾಂತ್, ‘ಮುದ್ಗಲ್ ಸಮಿತಿ 13 ಕಳಂಕಿತರ ಹೆಸರನ್ನು ಪಟ್ಟಿ ಮಾಡಿತ್ತು. ಆದರೆ, ಭಾರತೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುವ ಕಾರಣ ಆಟಗಾರರ ಹೆಸರನ್ನು ಬಹಿರಂಗಗೊಳಿಸದಂತೆ ಬಿಸಿಸಿಐ ಮನವಿ ಮಾಡಿಕೊಂಡಿತು’ ಎಂದು ಶ್ರೀಶಾಂತ್ ದೂರಿದ್ದಾರೆ. ಇದೇ ವೇಳೆ, ‘ಕೇವಲ ಆರೋಪ ಕೇಳಿ ಬಂದ ಕಾರಣ ನನ್ನನ್ನು ಜೈಲಿಗಟ್ಟಿತು. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

Latest Videos

‘ಆ 13 ಜನ ಆಟಗಾರರ ಹೆಸರು ನನಗೆ ಗೊತ್ತು. ಅದನ್ನು ಬಹಿರಂಗಗೊಳಿಸುತ್ತೇನೆ ಎಂದು ನಾನು ಹೇಳುತ್ತಿಲ್ಲ. ಆದರೆ, ದೆಹಲಿಯಲ್ಲಿ ನನ್ನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಹಲವರ ಹೆಸರನ್ನು ನಾನು ತಿಳಿಸಿದ್ದೆ. ಆದರೆ, ಅವರು ಇಂದಿಗೂ ಕ್ರಿಕೆಟ್ ಆಡುತ್ತಲೇ ಇದ್ದಾರೆ. ಹಾಗಾದರೆ ಅವರ ವಿರುದ್ಧ ಯಾವುದೇ ಕ್ರಮಕೈ ಗೊಳ್ಳುವುದಿಲ್ಲವೇ? ನನ್ನ ವಿರುದ್ಧ ಕ್ರಮಕ್ಕೆ ಮುಂದಾದ ಬಿಸಿಸಿಐ, ಅವರ ಬೆನ್ನಿಗೆ ನಿಂತಿದ್ದು ಏಕೆ’ ಎಂದು ಕಿಡಿ ಕಾಡಿದ್ದಾರೆ.

‘ನಾನು ಯಾರ ಹೆಸರನ್ನೂ ಬಹಿರಂಗಗೊಳಿಸುವುದಿಲ್ಲ. ಒಂದೊಮ್ಮೆ ಬಹಿರಂಗಗೊಳಿಸಿದರೆ ನನ್ನ ಹಾಗೂ ನನ್ನ ಕುಟುಂಬದ ಮೇಲಾಗುವ ಪರಿಣಾಮದ ಬಗ್ಗೆ ಅರಿವಿದೆ. ಆದರೆ, ಬಿಸಿಸಿಐನ ಈ ಇಬ್ಬಗೆ ನೀತಿಯನ್ನು ಖಂಡಿಸುತ್ತೇನೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

click me!