ಆಲ್ ದಿ ಬೆಸ್ಟ್ ಟೀಂ ಇಂಡಿಯಾ; ಇಂಗ್ಲೆಂಡ್ ತಲುಪಿದ ವಿರಾಟ್ ಪಡೆ

By Web DeskFirst Published May 23, 2019, 11:40 AM IST
Highlights

ಮುಂಬೈ ವಿಮಾನ ನಿಲ್ದಾಣದಿಂದ ಭಾರತ ತಂಡ, ಇಂಗ್ಲೆಂಡ್‌ಗೆ ಪ್ರಯಾಣಿಸಿತು. ಸಂಜೆ ವೇಳೆಗೆ ಭಾರತ ತಂಡದ ಆಟಗಾರರು ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಎಂ.ಎಸ್ ಧೋನಿ ಕೂಡ ಸದ್ಯ 15 ಆಟಗಾರರ ಭಾರತ ತಂಡದಲ್ಲಿದ್ದಾರೆ.

ಮುಂಬೈ: ಮೇ 30 ರಿಂದ ಇಂಗ್ಲೆಂಡ್ ಮತ್ತು ವೇಲ್ಸ್'ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ 15 ಆಟಗಾರರ ಭಾರತ ಕ್ರಿಕೆಟ್ ತಂಡ ಬುಧವಾರ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿತು. 

ಮುಂಬೈ ವಿಮಾನ ನಿಲ್ದಾಣದಿಂದ ಭಾರತ ತಂಡ, ಇಂಗ್ಲೆಂಡ್‌ಗೆ ಪ್ರಯಾಣಿಸಿತು. ಸಂಜೆ ವೇಳೆಗೆ ಭಾರತ ತಂಡದ ಆಟಗಾರರು ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದ ಎಂ.ಎಸ್ ಧೋನಿ ಕೂಡ ಸದ್ಯ 15 ಆಟಗಾರರ ಭಾರತ ತಂಡದಲ್ಲಿದ್ದಾರೆ.

ವಿಶ್ವಕಪ್ ಬೇಟೆಯಾಡಲು ಇಂಗ್ಲೆಂಡ್ ಫ್ಲೈಟ್ ಏರಿದ ಭಾರತದ ಹುಲಿಗಳು

ಮೇ 25ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. 28ರಂದು ಬಾಂಗ್ಲಾದೇಶ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯ ಆಡಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 3ರಿಂದ ಪಂದ್ಯಗಳು ಆರಂಭಗೊಳ್ಳಲಿವೆ. ಮೇ 30ರಂದು ಏಕದಿನ ವಿಶ್ವಕಪ್ ಉದ್ಘಾಟನೆ ನಡೆಯಲಿದೆ. ಅದೇ ದಿನ ಚಾಲನೆ ದೊರೆತರೂ, ಭಾರತ ತಂಡ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಹೀಗಾಗಿ ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಐಪಿಎಲ್‌ನಿಂದ ಧಣಿದಿದ್ದಾರೆ ಎನ್ನುತ್ತಿರುವ ಟೀಂ ಇಂಡಿಯಾದ ಆಟಗಾರರಿಗೆ ವಿಶ್ರಾಂತಿ ಪಡೆಯಲು ಕೊಂಚ ದಿನಗಳ ಕಾಲ ಸಮಯ ಲಭಿಸಲಿದೆ.

ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೂ ಮುನ್ನ ಭಾರತ ತಂಡದ ವೇಳಾಪಟ್ಟಿ ಈ ಕೆಳಕಂಡಂತೆ ಇರಲಿದೆ:

* ಮೇ 22: ಮುಂಬೈನಿಂದ ಲಂಡನ್‌ಗೆ ಪ್ರಯಾಣ.

* ಮೇ 23: ವಿಶ್ರಾಂತಿ ದಿನ. ಶಿಷ್ಟಾಚಾರದ ಪ್ರಕಾರ ಟೀಂ ಇಂಡಿಯಾದ ಆಟಗಾರರು ಹಾಗೂ ತಂಡದ ನಿರ್ವಹಣೆ ಮಂಡಳಿ ಸದಸ್ಯರ ಜತೆ ಸಭೆ. ಮುಂಬರುವ 8 ದಿನಗಳ ವೇಳಾಪಟ್ಟಿ ಕುರಿತು ಚರ್ಚೆ.

* ಮೇ 24: ಲಂಡನ್‌ನ ಓವಲ್ ಅಂಗಳದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭ್ಯಾಸ. ಮಾಧ್ಯಮಗಳ ಜತೆ ಕೊಹ್ಲಿ ಸೇರಿದಂತೆ ಉಳಿದ ಎಲ್ಲಾ ತಂಡಗಳ ನಾಯಕರ ಸಂವಾದ. ಭ್ರಷ್ಟಾಚಾರ ನಿಗ್ರಹ ಹಾಗೂ ಆ್ಯಂಟಿ ಡೋಪಿಂಗ್ ವಿಚಾರ ಸಂಕಿರಣದಲ್ಲಿ ಭಾಗಿ.

* ಮೇ 25: ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ.

* ಮೇ 26: ರಸ್ತೆ ಮೂಲಕ ಲಂಡನ್‌ನಿಂದ ಕಾರ್ಡಿಫ್ ನಗರಕ್ಕೆ ಪ್ರಯಾಣ.

* ಮೇ 27: ಕಾರ್ಡಿಫ್‌ನ ಸೋಫಿಯಾ ಗಾರ್ಡನ್ ಅಂಗಳದಲ್ಲಿ ಅಭ್ಯಾಸ.

* ಮೇ 28: ಬಾಂಗ್ಲಾದೇಶದ ವಿರುದ್ಧ 2ನೇ ಅಭ್ಯಾಸ ಪಂದ್ಯ.

* ಮೇ 29: ಸೌತಾಂಪ್ಟನ್‌ಗೆ ಭಾರತ ಆಟಗಾರರ ಪ್ರಯಾಣ. ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಗೆ ವಿರಾಟ್ ಕೊಹ್ಲಿ ಭೇಟಿ. 10 ತಂಡಗಳ ನಾಯಕರೊಂದಿಗೆ ಇಂಗ್ಲೆಂಡ್ ರಾಣಿ ಹೈ ಟೀ (ಚಹಾ ಕೂಟ).

* ಮೇ 30: ವಿಶ್ವಕಪ್ ಪಂದ್ಯಾವಳಿಗೆ ಚಾಲನೆ. ಇಂಗ್ಲೆಂಡ್ - ದ.ಆಫ್ರಿಕಾ ನಡುವೆ ಮೊದಲ ಪಂದ್ಯ. ಭಾರತ ತಂಡಕ್ಕೆ ಮತ್ತೊಂದು ವಿಶ್ರಾಂತಿ ದಿನ.

* ಮೇ 31: ಭಾರತ ತಂಡದ ಅಭ್ಯಾಸ ಆರಂಭ. ಜೂ.5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ.
 

click me!