
ಕೊಲಂಬೊ(ಆ.31): ಟೀಂ ಇಂಡಿಯಾ ಬೌಲರ್'ಗಳ ಕರಾರುವಕ್ಕಾದ ದಾಳಿ ಹಾಗೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಫೋಟಕ ಶತಕಗಳ ನೆರವಿನಿಂದ ಶ್ರೀಲಂಕಾ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಭಾರತ 168 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 4-0 ಮುನ್ನಡೆ ಸಾಧಿಸಿದೆ
ವಿರಾಟ್ ಕೊಹ್ಲಿ ಪಡೆ ನೀಡಿದ್ದ 376 ರನ್'ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆತಿಥೇಯ ತಂಡ ಕೇವಲ 42.4 ಓವರ್'ಗಳಲ್ಲಿ 207 ರನ್'ಗಳಿಗೆ ಸರ್ವಪತನಗೊಂಡಿತು. ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್ ಏಕಾಂಗಿ ಹೋರಾಟ ನಡೆಸಿ 70 ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ, ಲಂಕಾದ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.
ಲಂಕಾದ ಯಾವ ಜೋಡಿಗೂ ಕ್ರೀಸ್'ನಲ್ಲಿ ನೆಲೆಯೂರಿ ಉತ್ತಮ ಜೊತೆಯಾಟವಾಡಲು ಟೀಂ ಇಂಡಿಯಾ ಬೌಲರ್'ಗಳು ಅವಕಾಶ ನೀಡಲಿಲ್ಲ. ಸತತವಾಗಿ ಲಂಕಾ ವಿಕೆಟ್ ಕಳೆದುಕೊಂಡಿತು. ಮ್ಯಾಥ್ಯೂಸ್ ಅರ್ಧಶತಕ ಬಾರಿಸಿ ತಂಡ 200 ರನ್ ಗಡಿ ದಾಟಲು ನೆರವಾದರು.
ಭಾರತ ಪರ ಬುಮ್ರಾ, ಪಾಂಡ್ಯ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಕೇವಲ 5 ವಿಕೆಟ್ ಕಳೆದುಕೊಂಡು 375 ರನ್ ಕಲೆ ಹಾಕಿತ್ತು. ಭಾರತ ಪರ ವಿರಾಟ್ ಕೊಹ್ಲಿ ವೃತ್ತಿ ಜೀವನದ 29ನೇ ಶತಕ ಸಿಡಿಸಿದರೆ, ರೋಹಿತ್ ಶರ್ಮಾ ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕನ್ನಡಿಗ ಮನೀಶ್ ಪಾಂಡೆ ಅರ್ಧ ಶತಕ ಸಿಡಿಸಿದರೆ, ಮುನ್ನೂರನೇ ಪಂದ್ಯವಾಡಿದ ಧೋನಿ ಅಜೇಯ 49ರನ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ :375/5
ವಿರಾಟ್ ಕೊಹ್ಲಿ: 131
ರೋಹಿತ್ ಶರ್ಮಾ : 104
ಆ್ಯಂಜಲೋ ಮ್ಯಾಥ್ಯೂಸ್ :24/2
ಶ್ರೀಲಂಕಾ : 207/10
ಆ್ಯಂಜಲೋ ಮ್ಯಾಥ್ಯೂಸ್ : 70
ಮಿಲಿಂದಾ ಸಿರಿವರ್ಧನಾ : 39
ಕುಲ್ದೀಪ್ ಯಾದವ್ : 31/2
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.