
ದುಬೈ[ಸೆ.04]: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡಿದ್ದರೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ವೇಳೆ 4ನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೇಗಿ ಮೊಹಮದ್ ಶಮಿ 3 ಸ್ಥಾನಗಳ ಜಿಗಿತ ಕಂಡಿದ್ದು ಅಗ್ರ 20ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, 200 ರನ್ ಪೇರಿಸಿದ್ದರು. ಈ ಪರಿಣಾಮ 31 ರೇಟಿಂಗ್ ಪಾಯಿಂಟ್ ಕೊಹ್ಲಿ ಖಾತೆಗೆ ಜಮೆಗೊಳ್ಳುವ ಮೂಲಕ ಟೀಂ ಇಂಡಿಯಾ ನಾಯಕ, 32 ತಿಂಗಳಿಂದ ಅಗ್ರಸ್ಥಾನದಲ್ಲಿದ್ದ ಸ್ಟೀವ್ ಸ್ಮಿತ್‌ರನ್ನು ಹಿಂದಿಕ್ಕಿ ವೃತ್ತಿಜೀವನದಲ್ಲಿ ಮೊದಲ ಬಾರಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಆದರೆ, 2ನೇ ಟೆಸ್ಟ್‌ನಲ್ಲಿ ನೀಡಿದ ಸಾಧಾರಣ ಪ್ರದರ್ಶನದ ಕಾರಣ 2ನೇ ಸ್ಥಾನಕ್ಕೆ ಕುಸಿದಿದ್ದರು. ಬಳಿಕ ಫಾರ್ಮ್‌ಗೆ ಮರಳಿದ ವಿರಾಟ್ 3ನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಲಯ ಕಂಡುಕೊಂಡ ಕೊಹ್ಲಿ ಮತ್ತೆ ಮೊದಲ ಸ್ಥಾನ ಪಡೆದರು. ಇದೀಗ ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್‌ನಲ್ಲಿ ವಿರಾಟ್ 46 ಹಾಗೂ 58 ರನ್ ಕೂಡಿ ಹಾಕುವ ಮೂಲಕ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದರು. ಇದು ಮತ್ತೆ ವಿರಾಟ್ ನಂ.1 ಸ್ಥಾನದಲ್ಲಿ ಮುಂದುವರೆಯಲು ಕಾರಣವಾಯಿತು.
6ನೇ ಸ್ಥಾನದಲ್ಲಿ ಪೂಜಾರ: 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 132 ರನ್ ಪೇರಿಸುವ ಮೂಲಕ ಭಾರತದ ಮುನ್ನಡೆಗೆ ಕಾರಣರಾಗಿದ್ದ ಚೇತೇಶ್ವರ್ ಪೂಜಾರ, ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಅಮೋಘ ಆಟದ ಪರಿಣಾಮ ಪೂಜಾರ ಅಂಕಗಳಿಕೆ 762ರಿಂದ 798ಕ್ಕೇರಿದೆ.
19ನೇ ಸ್ಥಾನಕ್ಕೇರಿದ ಶಮಿ: 4ನೇ ಟೆಸ್ಟ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದ ವೇಗಿ ಮೊಹಮದ್ ಶಮಿ, 3 ಸ್ಥಾನ ಜಿಗಿತದೊಂದಿಗೆ ಬೌಲಿಂಗ್ ವಿಭಾಗದಲ್ಲಿ 19ನೇ ಸ್ಥಾನಕ್ಕೇರಿದ್ದು, ಮತ್ತೆ ಅಗ್ರ 20ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಶಾಂತ್ ಶರ್ಮಾ 25ನೇ ಸ್ಥಾನಕ್ಕೇರಿದ್ದರೆ, ಜಸ್‌ಪ್ರೀತ್ ಬೂಮ್ರ 37ನೇ ಸ್ಥಾನದಲ್ಲೇ ಉಳಿದಿದ್ದಾರೆ.
ವೃತ್ತಿಜೀವನದ ಗರಿಷ್ಠ ರೇಟಿಂಗ್ ಪಾಯಿಂಟ್
ಪ್ರಚಂಡ ಲಯದಲ್ಲಿರುವ ವಿರಾಟ್ ಕಳೆದ 8 ಇನ್ನಿಂಗ್ಸ್‌ಗಳಿಂದ 544 ರನ್ ಸಿಡಿಸಿದ್ದು, ತಮ್ಮ ಖಾತೆಯಲ್ಲಿದ್ದ 937 ರೇಟಿಂಗ್ ಪಾಯಿಂಟ್‌ನ್ನು ಕಾಯ್ದುಕೊಂಡಿದ್ದಾರೆ. ವಿರಾಟ್ ಕೊಹ್ಲಿಯ 937 ಅಂಕ,
ಸಾರ್ವಕಾಲಿಕ ಗರಿಷ್ಠ ರೇಟಿಂಗ್ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ. 3ನೇ ಟೆಸ್ಟ್‌ನಲ್ಲೂ 200 ರನ್ ಬಾರಿಸುವ ಮೂಲಕ 18 ಅಂಕಗಳನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದರು. ಇದಕ್ಕೂ ಮುನ್ನ ವಿರಾಟ್ 919 ಅಂಕ ಹೊಂದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.