
ನವದೆಹಲಿ(ಅ. 08): ಕಾಂಗರೂಗಳ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ವಶಪಡಿಸಿಕೊಂಡ ಬಳಿಕ ಟಿ20 ಸರಣಿಯನ್ನೂ ಗೆಲುವಿನೊಂದಿಗೆ ಟೀಮ್ ಇಂಡಿಯಾ ಆರಂಭಿಸಿದೆ. ನಿನ್ನೆ ರಾಂಚಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್'ಗಳಿಂದ ಆಸ್ಟ್ರೇಲಿಯನ್ನರನ್ನು ಬಗ್ಗುಬಡಿಯಿತು. ಆದರೆ, ವಿರಾಟ್ ಕೊಹ್ಲಿ ಮಾತ್ರ ಇನ್ನೂ ಗರಂ ಆಗಿಯೇ ಇದ್ದಾರಂತೆ. ಕೊಹ್ಲಿ ಕೋಪಕ್ಕೆ ಕಾರಣವಾಗಿದ್ದು ಡಕ್ವರ್ಥ್ ಲಿವಿಸ್ ಲೆಕ್ಕಾಚಾರದ ಟಾರ್ಗೆಟ್. ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 6 ಓವರ್'ಗಳಲ್ಲಿ 48 ರನ್ ಟಾರ್ಗೆಟ್ ಕೊಡಲಾಗಿತ್ತು. ಇದು ಅನ್ಯಾಯ ಎಂಬುದು ಕೊಹ್ಲಿ ವಾದ.
ಭಾರತೀಯ ಬೌಲರ್'ಗಳು ಈ ಮೊದಲು ಅದ್ಭುತವಾಗಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಇನ್ನಿಂಗ್ಸನ್ನು 118 ರನ್'ಗೆ ಸೀಮಿತಗೊಳಿಸಿದ್ದರು. ಕಾಂಗರೂಗಳ ತಂಡವು 18.4 ಓವರ್'ನಲ್ಲಿ 8 ವಿಕೆಟ್ ನಷ್ಟಕ್ಕೆ 118 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಮಳೆ ಬಂದು ಆಟ ನಿಂತಿತು. ಮಳೆ ನಿಂತ ಬಳಿಕ ಪಿಚ್'ನಲ್ಲಿ ಬ್ಯಾಟ್ ಮಾಡುವುದು ಸ್ವಲ್ಪ ಕಷ್ಟಕರವೇ. ಈ ವಿಚಾರವನ್ನು ಪರಿಗಣಿಸದೆಯೇ ಡಕ್ವರ್ತ್ ಲಿವಿಸ್ ನಿಯಮವನ್ನು ಕುರುಡಾಗಿ ಅನುಸರಿಸಿ ಭಾರತಕ್ಕೆ ಗುರಿ ಕೊಟ್ಟಿದ್ದು ಸರಿ ಇಲ್ಲ ಎಂಬುದು ಕೊಹ್ಲಿ ಅಭಿಪ್ರಾಯ. ಅವರ ಪ್ರಕಾರ, 6 ಓವರ್'ನಲ್ಲಿ 40 ರನ್ ಟಾರ್ಗೆಟ್ ಕೊಟ್ಟಿದ್ದರೆ ನ್ಯಾಯಯುತವಾಗಿರುತ್ತಿತ್ತಂತೆ. ಆದರೆ, ಅದೃಷ್ಟಕ್ಕೆ ಶಿಖರ್ ಧವನ್, ವಿರಾಟ್ ಕೊಹ್ಲಿ ಭಾರತವನ್ನು ಗೆಲುವಿನ ಗಡಿ ಮುಟ್ಟಿಸಿದರು.
ಇದಕ್ಕೆ ಮುನ್ನ, ಕುಲದೀಪ್ ಯಾದವ್, ಜಸ್'ಪ್ರೀತ್ ಬುಮ್ರಾ ಮತ್ತು ಯುಜವೇಂದ್ರ ಚಹಲ್ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದರು. ಕುಲದೀಪ್ ಅವರಂತೂ ಕಾಂಗರೂಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸುತ್ತಿದ್ದಾರೆ.
ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಎರಡನೇ ಪಂದ್ಯವು ಅಕ್ಟೋಬರ್ 10ರಂದು ಗುವಾಹತಿಯಲ್ಲಿ ನಡೆಯಲಿದೆ. ಸರಣಿ ಜೀವಂತವಾಗಿರಿಸಿಕೊಳ್ಳಲು ಆಸ್ಟ್ರೇಲಿಯಾಗೆ ಅದು ಮಾಡು ಇಲ್ಲ ಮಡಿ ಪಂದ್ಯವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.