
ನಾಗ್ಪುರ(ಡಿ.07): ಬೌಲಿಂಗ್ ಹಾಗೂ ಬ್ಯಾಟಿಂಗ್'ನಲ್ಲಿ ಮುಂಬೈ ವಿರುದ್ಧ ಪರಾಕ್ರಮ ಮೆರೆದ ಕರ್ನಾಟಕ ರಣಜಿ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಮೊದಲ ದಿನದ ಗೌರವ ಪಡೆದಿದೆ.
ಇಂದು ಆರಂಭವಾದ ಎಂಟರಘಟ್ಟದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕರ್ನಾಟಕ, ವಿನಯ್ ಕುಮಾರ್ ಅವರ ಮಾರಕ ದಾಳಿಯ ನೆರವಿನಿಂದ ಮುಂಬೈ ತಂಡವನ್ನು 173 ರನ್'ಗಳಿಗೆ ಆಲೌಟ್ ಮಾಡಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ ಕರ್ನಾಟಕ 1 ವಿಕೆಟ್ ನಷ್ಟಕ್ಕೆ 115 ರನ್ ಕಲೆ ಹಾಕಿದ್ದು, ಇನ್ನು ಕೇವಲ 58 ರನ್'ಗಳ ಹಿನ್ನಡೆಯಲ್ಲಿದೆ.
41 ಬಾರಿ ರಣಜಿ ಸಾಮ್ರಾಟ ಮುಂಬೈ ಪಡೆಯನ್ನು ಸುಲಭ ಮೊತ್ತಕ್ಕೆ ಕಟ್ಟಿಹಾಕಿದ ಕರ್ನಾಟಕ, ಬ್ಯಾಟಿಂಗ್'ನಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ಆರ್. ಸಮರ್ಥ್ ಹಾಗೂ ಮಯಾಂಕ್ ಅಗರ್'ವಾಲ್ ಜೋಡಿ 83 ರನ್ ಕಲೆ ಹಾಕಿತು. ಸಮರ್ಥ್ 40 ರನ್ ಗಳಿಸಿದ್ದಾಗ ಮುಂಬೈನ ಶಿವಂ ದುಬೈ ಬೌಲಿಂಗ್'ನಲ್ಲಿ ಕ್ಲೀನ್ ಬೌಲ್ಡ್ ಆದರು. ಇದು ಶಿವಂ ದುಬೈಗೆ ಪ್ರಥಮ ದರ್ಜೆ ಕ್ರಿಕೆಟ್'ನ ಚೊಚ್ಚಲ ವಿಕೆಟ್. ಅದು ಕೂಡಾ ಶಿವಂ ಮೊದಲ ಎಸೆತದಲ್ಲೇ ವಿಕೆಟ್ ಬಿದ್ದಿದ್ದು ಮತ್ತೊಂದು ವಿಶೇಷ. ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಮುಂದುವರೆಸಿರುವ ಮಯಾಂಕ್ ಅಗರ್'ವಾಲ್ (62*) ಅರ್ಧಶತಕ ಬಾರಿಸಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಮೀರ್ ಕುನ್ಹಯ್ಯನ್ ಅಬ್ಬಾಸ್ 12* ಸಾಥ್ ನೀಡಿದ್ದಾರೆ.
ಇದಕ್ಕೂ ಮೊದಲು ವಿನಯ್ ಕುಮಾರ್ ಓವರ್ ಹ್ಯಾಟ್ರಿಕ್ ಬೌಲಿಂಗ್ ನೆರವಿನಿಂದ ಮುಂಬೈ ತಂಡವನ್ನು ಕೇವಲ 173 ರನ್'ಗಳಿಗೆ ಕಟ್ಟಿಹಾಕುವಲ್ಲಿ ಕರ್ನಾಟಕ ಸಫಲವಾಯಿತು. ಕರ್ನಾಟಕ ಪರ ವಿನಯ್ ಕುಮಾರ್ 6 ವಿಕೆಟ್ ಪಡೆದು ಮಿಂಚಿದರು. ಮುಂಬೈ ಪರ ಧವಳ್ ಕುಲಕರ್ಣಿ 75 ರನ್ ಬಾರಿಸುವ ಮೂಲಕ ಸಂಕಷ್ಟದಲ್ಲಿದ್ದ ಮುಂಬೈಗೆ ಆಸರೆಯಾದರು. 10ನೇ ವಿಕೆಟ್'ಗೆ ಮುಂಬೈ ತಂಡ 70 ರನ್'ಗಳ ಜತೆಯಾಟವಾಡಿತು.
ಸಂಕ್ಷಿಪ್ತ ಸ್ಕೋರ್:
ಮುಂಬೈ: 173/10
ಧವಳ್ ಕುಲಕರ್ಣಿ: 75
ವಿನಯ್ ಕುಮಾರ್: 34/6
ಕರ್ನಾಟಕ: 115/1
ಮಯಾಂಕ್ ಅಗರ್'ವಾಲ್: 62*
ಶಿವಂ ದುಬೈ: 11/1
(ಮೊದಲ ದಿನದಾಟ ಮುಕ್ತಾಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.