
ಮುಂಬೈ(ಮಾ.03): ಭಾರತ ಅಂಡರ್-19 ಕ್ರಿಕೆಟ್ ತಂಡ ಐಸಿಸಿ ವಿಶ್ವಕಪ್ ಗೆದ್ದು ಒಂದು ತಿಂಗಳೊಳಗೆ ಬಿಸಿಸಿಐ ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ರಾಜೀನಾಮೆ ನೀಡಿದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥರಾಗಿ 30 ತಿಂಗಳ ಕಾಲ ಕಾರ್ಯನಿರ್ವಹಿಸಿದ ಅವರಿಗೆ, ಇತ್ತೀಚೆಗೆ ಬಿಸಿಸಿಐನ ಕೆಲ ಹಿರಿಯ ಅಧಿಕಾರಿಗಳೊಂದಿಗೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿರುವ ಪ್ರಸಾದ್, ತಮ್ಮ ವಿರುದ್ಧ ಸ್ವಹಿತಾಸಕ್ತಿ ಆರೋಪ ಕೇಳಿಬರಬಾರದು ಎನ್ನುವ ಉದ್ದೇಶದಿಂದ ಆಯ್ಕೆ ಸಮಿತಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ‘ಪ್ರಸಾದ್ ರಾಜೀನಾಮೆಗೆ ಮೂಲ ಕಾರಣವೇನೆಂದು ಇನ್ನೂ ತಿಳಿದಿಲ್ಲ. ಬಹುಶಃ ಅವರು ಯಾವುದಾದರೂ ಐಪಿಎಲ್ ತಂಡಕ್ಕೆ ಸೇರಿಕೊಳ್ಳುತ್ತಿರಬಹುದು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ ‘ನಾನು ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಅವರು ನಿರ್ಧಾರ ಬದಲಿಸಲು ಸಿದ್ಧರಿರಲಿಲ್ಲ. ಪ್ರತಿಭಾನ್ವೇಷಣೆಯಲ್ಲಿ ಅವರ ಕಾರ್ಯ ಶ್ಲಾಘನೀಯ’ ಎಂದಿದ್ದಾರೆ. ಇತ್ತೀಚೆಗೆ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದ ಬಿಸಿಸಿಐ, ಬಹುಮಾನಕ್ಕೆ ಆಯ್ಕೆ ಸಮಿತಿಯನ್ನು ಪರಿಗಣಿಸಿರಲಿಲ್ಲ. ಚಾಂಪಿಯನ್ಸ್ ಟ್ರೋಫಿ ಹಾಗೂ ಮಹಿಳಾ ವಿಶ್ವಕಪ್ ಫೈನಲ್'ನಲ್ಲಿ ಸೋತ ಭಾರತ ತಂಡಗಳ ಆಯ್ಕೆಗಾರರಿಗೆ ನಗದು ಬಹುಮಾನ ನೀಡಿದ್ದ ಬಿಸಿಸಿಐ, ಚಾಂಪಿಯನ್ ತಂಡವನ್ನು ಆಯ್ಕೆ ಮಾಡಿದ ಸಮಿತಿಗೇಕೆ ಬಹುಮಾನ ನೀಡುತ್ತಿಲ್ಲ ಎನ್ನುವ ವಿಚಾರ ಭಾರೀ ವಿವಾದ ಹುಟ್ಟಿಹಾಕಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.