ಯುಎಸ್ ಓಪನ್ 2024: ಸ್ವಿಯಾಟೆಕ್‌, ಸಿನ್ನರ್‌ ಪ್ರಿ ಕ್ವಾರ್ಟರ್‌ಗೆ ಲಗ್ಗೆ

By Kannadaprabha News  |  First Published Sep 2, 2024, 7:58 AM IST

ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವ ನಂ.1 ಟೆನಿಸಿಗರಾದ ಇಟಲಿಯ ಯಾನ್ನಿಕ್‌ ಸಿನ್ನರ್‌ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನ್ಯೂಯಾರ್ಕ್‌: ವಿಶ್ವ ನಂ.1 ಟೆನಿಸಿಗರಾದ ಇಟಲಿಯ ಯಾನ್ನಿಕ್‌ ಸಿನ್ನರ್‌ ಹಾಗೂ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ರಾತ್ರಿ ನಡೆದ 3ನೇ ಸುತ್ತಿನ ಪಂದ್ಯದಲ್ಲಿ 23 ವರ್ಷದ ಸಿನ್ನರ್‌ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಓ''ಕಾನ್ನೆಲ್ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಆಸ್ಟ್ರೇಲಿಯನ್‌ ಓಪನ್‌ ಬಳಿಕ 2ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿರುವ ಸಿನ್ನರ್‌, 4ನೇ ಸುತ್ತಿನಲ್ಲಿ ಅಮೆರಿಕದ 14ನೇ ಶ್ರೇಯಾಂಕಿತ ಟಾಮಿ ಪೌಲ್‌ ವಿರುದ್ಧ ಸೆಣಸಾಡಲಿದ್ದಾರೆ. ಇದೇ ವೇಳೆ 5ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌, 8ನೇ ಶ್ರೇಯಾಂಕಿತ ಕ್ಯಾಸ್ಪೆರ್‌ ರುಡ್‌ ಕೂಡಾ 4ನೇ ಸುತ್ತು ಪ್ರವೇಶಿಸಿದರು.

Latest Videos

undefined

ಮೈಸೂರಿನ ಮಡಿಲಿಗೆ ಮಹಾರಾಜ ಟ್ರೋಫಿ ಕಿರೀಟ; ಬೆಂಗಳೂರು ಬ್ಲಾಸ್ಟರ್ಸ್‌ಗೆ ಮತ್ತೊಮ್ಮೆ ನಿರಾಸೆ

ಇಗಾ ಮುನ್ನಡೆ: 2022ರ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಭಾನುವಾರ ರಷ್ಯಾದ ಅನಾಸ್ತಾಸಿಯಾ ವಿರುದ್ಧ 6-4, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ಸತತ 4ನೇ ವರ್ಷವೂ ಯುಎಸ್‌ ಓಪನ್‌ನಲ್ಲಿ 4ನೇ ಸುತ್ತು ಪ್ರವೇಶಿಸಿದರು. ಚೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ, ಈ ವರ್ಷ ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ನ ರನ್ನರ್‌-ಅಪ್‌, ಇಟಲಿಯ ಜಾಸ್ಮೀನ್‌ ಪೌಲಿನಿ ಕೂಡಾ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದರು.

ಬೋಪಣ್ಣ-ಆಲ್ದಿಲಾ ಮಿಶ್ರ ಡಬಲ್ಸ್‌ ಕ್ವಾರ್ಟರ್‌ಗೆ ಲಗ್ಗೆ

ಯುಎಸ್‌ ಓಪನ್‌ ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಆಲ್ದಿಲಾ ಸುಟ್ಜಿಯಾದಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 8ನೇ ಶ್ರೇಯಾಂಕಿತ ಜೋಡಿ 2ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜಾನ್‌ ಪಿಯರ್ಸ್‌ ಹಾಗೂ ಚೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ವಿರುದ್ಧ 0-6, 7-6(5), 10-7 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌-ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ವಿರುದ್ಧ ಸೆಣಸಲಿದೆ. ಬೋಪಣ್ಣ ಅವರು ಈಗಾಗಲೇ ಪುರುಷರ ಡಬಲ್ಸ್‌ನಲ್ಲಿ ಎಬ್ಡೆನ್‌ ಜೊತೆಗೂಡಿ 3ನೇ ಸುತ್ತು ಪ್ರವೇಶಿಸಿದ್ದಾರೆ.

ರಾಷ್ಟ್ರೀಯ ಅಥ್ಲೆಟಿಕ್ಸ್‌: ರಾಜ್ಯದ ಮಹಿಳಾ ರಿಲೇ ತಂಡಕ್ಕೆ ಸ್ವರ್ಣ

ಬೆಂಗಳೂರು: 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮೊದಲ ಚಿನ್ನ ಗೆದ್ದಿದೆ. ಕೂಟದ 3ನೇ ದಿನವಾದ ಭಾನುವಾರ ಮಹಿಳೆಯರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಸ್ನೇಹಾ ಎಸ್‌.ಎಸ್‌, ಧಾನೇಶ್ವರಿ, ಜ್ಯೋತಿಕಾ ಹಾಗೂ ಕಾವೇರಿ ಪಾಟೀಲ್‌ ಅವರನ್ನೊಳಗೊಂಡ ತಂಡ 45.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡಿತು. 

ಯುಎಸ್‌ ಓಪನ್ 2024: ನೋವಾಕ್ ಜೋಕೋವಿಚ್ 25ನೇ ಗ್ರಾನ್‌ಸ್ಲಾಂ ಕನಸು ಭಗ್ನ!

ರೈಲ್ವೇಸ್‌ ಹಾಗೂ ಒಡಿಶಾ ತಂಡಗಳಿಗೆ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಲಭಿಸಿದವು. ಇನ್ನು, ರೈಲ್ವೇಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಆರ್ಯ ಎಸ್‌. ಪುರುಷರ ಲಾಂಗ್‌ಜಂಪ್‌ನಲ್ಲಿ 7.89 ಮೀ. ದೂರ ಜಿಗಿದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ರಾಜ್ಯದ ಮಣಿಕಂಠ ಇದ್ದ ಸರ್ವಿಸಸ್‌ ತಂಡ ಪುರುಷರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಕಂಚು ಗೆದ್ದಿತು. ಕೂಟ ಸೋಮವಾರ ಕೊನೆಗೊಳ್ಳಲಿದೆ.
 

click me!