ಯೋಧಾಗೆ ಮತ್ತೆ ಶರಣಾದ ತೆಲುಗು ಟೈಟಾನ್ಸ್

By Suvarna Web DeskFirst Published Aug 12, 2017, 10:35 PM IST
Highlights

ಕೇವಲ ಒಂದು ಅಂಕಗಳ ಹಿನ್ನಡೆ ಅನುಭವಿಸಿದ್ದ ತೆಲುಗು ಟೈಟಾನ್ಸ್ ತಂಡ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು.

ಅಹಮದಾಬಾದ್(ಆ.12): ತೆಲುಗು ಟೈಟಾನ್ಸ್ ತಂಡ ಸೋಲಿನ ಸರಪಳಿಯಿಂದ ಹೊರಬರಲು ಮತ್ತೊಮ್ಮೆ ವಿಫಲವಾಗಿದೆ. ಸ್ಟಾರ್ ಆಟಗಾರ ರಾಹುಲ್ ಚೌಧರಿಯ ಅದ್ಭುತ ಪ್ರದರ್ಶನದ ಹೊರತಾಗಿಯೂ, ನಿತಿನ್ ತೋಮರ್ ನೇತೃತ್ವದ ಬಲಿಷ್ಟ ಯುಪಿ ಯೋಧಾ ಎದುರು 39-32 ಅಂಕಗಳಿಂದ ಮುಗ್ಗರಿಸಿದೆ. ಈ ಮೂಲಕ 5ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ತಂಡ 6ನೇ ಸೋಲು ಕಂಡಿದೆ.

ಪಂದ್ಯದ ಮೊದಲ ರೈಡ್‌'ನಲ್ಲೇ ನಿತಿನ್ ತೋಮರ್ ಅವರನ್ನು ಟ್ಯಾಕಲ್ ಮಾಡುವ ಮೂಲಕ ಟೈಟಾನ್ಸ್ ಮೊದಲ ಅಂಕ ಗಳಿಸಿತು. ರಿಶಾಂಕ್ ದೇವಾಡಿಗ ಯೋಧಾಗೆ ಮೊದಲ ಅಂಕ ತಂದುಕೊಟ್ಟರು. ಮೊದಲಾರ್ಧದದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ಉಭಯ ತಂಡಗಳು ಎಚ್ಚರಿಕೆಯ ಆಟ ಪ್ರದರ್ಶಿಸಿದವು. ಮೊದಲಾರ್ಧದ ಅಂತ್ಯಕ್ಕೆ ಯುಪಿ ಯೋಧಾ 14-13ರ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಕೇವಲ ಒಂದು ಅಂಕಗಳ ಹಿನ್ನಡೆ ಅನುಭವಿಸಿದ್ದ ತೆಲುಗು ಟೈಟಾನ್ಸ್ ತಂಡ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಪರಿಣಾಮ 28ನೇ ನಿಮಿಷದಲ್ಲಿ ಯುಪಿ ಯೋಧಾ ತಂಡವನ್ನು ಆಲೌಟ್ ಮಾಡುವ ಮೂಲಕ 24-22 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ನಂತರದ ರೈಡಿಂಗ್ ಹಾಗೂ ಟ್ಯಾಕಲ್'ಗಳ ಮೂಲಕ ರಾಹುಲ್ ಪಡೆಯುನ್ನು ತಬ್ಬಿಬ್ಬು ಮಾಡಿದ ನಿತಿನ್ ಬಳಗ 37ನೇ ನಿಮಿಷದಲ್ಲಿ ಟೈಟಾನ್ಸ್ ಪಡೆಯನ್ನು ಆಲೌಟ್ ಮಾಡುವ ಮೂಲಕ 7 ಅಂಕಗಳ ಮುನ್ನಡೆ ಸಾಧಿಸಿತು. ಕೊನೆಯ ಮೂರು ನಿಮಿಷಗಳಲ್ಲಿ ತೆಲುಗು ಟೈಟಾನ್ಸ್ ಪಡೆ ಕೆಚ್ಚೆದೆಯ ಆಟ ಪ್ರದರ್ಶಿಸಿತಾದರೂ ಪಂದ್ಯವನ್ನು ಜಯಿಸುವಲ್ಲಿ ವಿಫಲವಾಯಿತು.

ಕಳೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಎದುರು ಕೂದಲೆಳೆಯಂತರದಲ್ಲಿ ಡ್ರಾ ಮಾಡಿಕೊಂಡಿದ್ದ ರಾಹುಲ್ ಪಡೆ ಈಗ ಮತ್ತೊಂದು ಸೋಲಿನ ಪಂದ್ಯಕ್ಕೆ ಸಾಕ್ಷಿಯಾಯಿತು. ಇನ್ನು ಕಳೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ನಿರಾಸೆ ಅನುಭವಿಸಿದ್ದ ನಿತಿನ್ ಪಡೆ ಈಗ ಮತ್ತೊಮ್ಮೆ ಜಯದ ಹಳಿಗೆ ಮರಳಿತು.

click me!