
Allan Nascimento UFC Dead: ಕ್ರೀಡಾಲೋಕಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಪ್ರಸಿದ್ಧ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಪ್ರಚಾರ ಸಂಸ್ಥೆಯಾದ ಯುಎಫ್‌ಸಿ (UFC) ತನ್ನ ಪ್ರತಿಭಾವಂತ ಫೈಟರ್ ಬ್ರೆಜಿಲ್‌ನ ಅಲ್ಲಾನ್ ನಾಸಿಮೆಂಟೊ (Allan Nascimento) ಸೋಮವಾರ ನಿಧನರಾಗಿದ್ದಾರೆ ಎಂದು ಘೋಷಿಸಿದೆ. ನಿದ್ರೆಯಲ್ಲೇ ಸಂಭವಿಸಿದ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಸೋಮವಾರ ಬೆಳಿಗ್ಗೆ ಅಲ್ಲಾನ್ ತಮ್ಮ ಮನೆಯಲ್ಲಿ ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ವೈದ್ಯಕೀಯ ತಂಡ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರು ನಿದ್ರೆಯಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯವನ್ನು ಯುಎಫ್‌ಸಿ ಅಧಿಕೃತವಾಗಿ ಖಚಿತಪಡಿಸಿದ್ದು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸಿದೆ.
ಬ್ರೆಜಿಲ್‌ನ ಪ್ರಖ್ಯಾತ 'ಶೂಟ್ ಬಾಕ್ಸೆ' (Chute Boxe) ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಅಲ್ಲಾನ್, ಮಾಜಿ ಯುಎಫ್‌ಸಿ ಚಾಂಪಿಯನ್ ಚಾರ್ಲ್ಸ್ ಒಲಿವೆರಾ (Charles Oliveira) ಅವರ ಆಪ್ತ ಸ್ನೇಹಿತ ಮತ್ತು ತರಬೇತಿ ಪಾಲುದಾರರಾಗಿದ್ದರು. ತಮ್ಮ ಗೆಳೆಯನ ಸಾವಿನ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿರುವ ಒಲಿವೆರಾ, ಇಂದು ನಾನು ಹೋರಾಟದ ಲೋಕ ನನಗೆ ನೀಡಿದ್ದ ಒಬ್ಬ ಸಹೋದರನನ್ನು ಕಳೆದುಕೊಂಡಿದ್ದೇನೆ. ನನ್ನ ಪ್ರತಿ ಪಂದ್ಯದಲ್ಲೂ ಜೊತೆಗಿದ್ದ ನಿನಗೆ ಧನ್ಯವಾದಗಳು. ನೀನೊಬ್ಬ ಲೆಜೆಂಡ್, ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
2011ರಲ್ಲಿ ವೃತ್ತಿಪರ ಎಂಎಂಎ ಲೋಕಕ್ಕೆ ಪ್ರವೇಶಿಸಿದ ಇವರು, 2021 ರಲ್ಲಿ ಯುಎಫ್‌ಸಿ ಸೇರಿದ್ದರು. ಅವರ ಒಟ್ಟಾರೆ ಎಂಎಂಎ ವೃತ್ತಿಜೀವನದಲ್ಲಿ 22 ಗೆಲುವು ಮತ್ತು 7 ಸೋಲುಗಳ ದಾಖಲೆ ಇದೆ. ಯುಎಫ್‌ಸಿಯಲ್ಲಿ ಅವರು 4-2 ದಾಖಲೆಯನ್ನು ಹೊಂದಿದ್ದರು. ಇದೇ ವರ್ಷ ಜೂನ್‌ನಲ್ಲಿ ಮಿಚ್ ರಾಪೋಸೊ ವಿರುದ್ಧ ನಡೆದ ಪಂದ್ಯವೇ ಅವರ ವೃತ್ತಿಜೀವನದ ಕೊನೆಯ ಹೋರಾಟವಾಗಿತ್ತು. ಅಲ್ಲಾನ್ ನಾಸಿಮೆಂಟೊ ಕೇವಲ ಒಬ್ಬ ಫೈಟರ್ ಮಾತ್ರವಾಗಿರದೆ, ಅವರ ಶಿಸ್ತು ಮತ್ತು ನಮ್ರತೆಗೆ ಹೆಸರಾಗಿದ್ದರು. ಶೂಟ್ ಬಾಕ್ಸೆ ತಂಡವು ಅವರನ್ನು ಒಬ್ಬ ಯೋಧ ಮತ್ತು ಅದ್ಭುತ ಮಾನವ ಎಂದು ಬಣ್ಣಿಸಿದೆ. ಇಷ್ಟು ಸಣ್ಣ ವಯಸ್ಸಿನಲ್ಲೇ ಅಪ್ರತಿಮ ಫೈಟರ್ ಒಬ್ಬರನ್ನು ಕಳೆದುಕೊಂಡಿರುವುದು ತೀವ್ರ ನೋವುಂಟು ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.