
ಬೆಂಗಳೂರು(ನ.07): ಯಾವುದೇ ಕ್ರೀಡೆಯಲ್ಲಿ ಫಾರ್ಮ್ ಜೊತೆಗೆ ಫಿಟ್ನೆಸ್ ಅಷ್ಟೇ ಮುಖ್ಯ. ಅದರಲ್ಲೂ ವರ್ಷದಿಂದ ವರ್ಷಕ್ಕೆ ಫಿಟ್ನೆಸ್ ಮಟ್ಟ ಕಡಿಮೆಯಾಗುತ್ತೆ. ಆದರೆ ಕ್ರೀಡಾಪಟುಗಳು ತಮ್ಮ ಫಿಟ್ನೆಸ್ ಕಾಪಾಡಿಕೊಂಡು ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಹೀಗೆ ಫಾರ್ಮ್ ಹಾಗೂ ಫಿಟ್ನೆಸ್ ಕಾಪಾಡಿಕೊಂಡು ಹೆಚ್ಚು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿದ ಕ್ರಿಕೆಟಿಗರಲ್ಲಿ ಏಷ್ಯಾ ಕ್ರಿಕೆಟಿಗರೇ ಮುಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಇದೀಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 19 ವರ್ಷ ಪೂರೈಸಿದ್ದಾರೆ. ಈ ಮೂಲಕ ಸುದೀರ್ಘ ವರ್ಷ ಕ್ರಿಕೆಟ್ ಆಡಿದ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ. 17ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಶೋಯೆಬ್ ಇದೀಗ 36ನೇ ವಯಸ್ಸಿನಲ್ಲೂ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾರೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವರ್ಷ ಸೇವೆ ಸಲ್ಲಿಸಿದ ಕ್ರಿಕೆಟಿಗರ ಪೈಕಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. 1989ರಿಂದ 2012ರ ವರೆಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ ಸಚಿನ್ ಬರೋಬ್ಬರಿ 22 ವರ್ಷಗಳ ಕಾಲ ಏಕದಿನ ಕ್ರಿಕೆಟ್ ಆಡಿದ್ದಾರೆ.
ಸುದೀರ್ಘ ವರ್ಷ ಏಕದಿನ ಕ್ರಿಕೆಟ್ ಆಡಿದರಲ್ಲಿ ಮೊದಲ 5 ಸ್ಥಾನದಲ್ಲಿರುವ ಎಲ್ಲರೂ ಏಷ್ಯಾ ಕ್ರಿಕೆಟಿಗರೇ ಅನ್ನೋದು ವಿಶೇಷ. ಸಚಿನ್ ಬಳಿಕ 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ಸನತ್ ಜಯಸೂರ್ಯ 20 ವರ್ಷ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ್ದಾರೆ.
ಪಾಕಿಸ್ತಾನದ ಜಾವೇದ್ ಮಿಯಾಂದಾದ್ 20 ವರ್ಷ, ಇದೀಗ ಶೋಯೆಬ್ ಮಲಿಕ್ 19, ಹಾಗೂ 5ನೇ ಸ್ಥಾನದಲ್ಲಿರುವ ಶ್ರೀಲಂಕಾದ ಅರವಿಂದ್ ಡಿಸಿಲ್ವ 18 ವರ್ಷ ಏಕದಿನ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಟಾಪ್ 5ನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಕ್ರಿಕೆಟಿಗರು ಏಷ್ಯಾ ಕ್ರಿಕೆಟಿಗರು ಅನ್ನೋದು ವಿಶೇಷ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.