ಭಾರತ ‘ಎ’ ತಂಡದ ಟೆಸ್ಟ್ ಆತಿಥ್ಯಕ್ಕೆ ನಕಾರ; ಲೋಧಾ ಸಮಿತಿಗೆ ಶ್ರೀನಿ ಸೆಡ್ಡು...?

By Suvarna Web DeskFirst Published Jan 8, 2017, 4:09 PM IST
Highlights

ವಿವಿಧ ಪ್ರಕಾರದ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿರುವ ನಿಮಿತ್ತ ಈ ಪಂದ್ಯಗಳನ್ನು ಚೆಪಾಕ್ ಮೈದಾನದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ’’ 

-ಟಿಎನ್‌'ಸಿಎ

ಚೆನ್ನೈ(ಜ.08): ಹತ್ತೊಂಭತ್ತು ವರ್ಷದೊಳಗಿನವರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ಹೊತ್ತುಕೊಳ್ಳಲು ಸಾಧ್ಯವಿಲ್ಲ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌'ಸಿಎ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ.

ವಿವಿಧ ಪ್ರಕಾರದ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿರುವ ನಿಮಿತ್ತ ಈ ಪಂದ್ಯಗಳನ್ನು ಚೆಪಾಕ್ ಮೈದಾನದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ’’ ಎಂದು ಟಿಎನ್‌'ಸಿಎ, ಬಿಸಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.

ನ್ಯಾ. ಲೋಧಾ ಸಮಿತಿ ಶಿಫಾರಸುಗಳ ಅನುಷ್ಠಾನ ವಿಷಯದಲ್ಲಿ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮೇಲೆ ನಿರ್ದಾಕ್ಷಿಣ್ಯ ನಿಲುವು ತಳೆದಿರುವ ಸರ್ವೋಚ್ಚ ನ್ಯಾಯಾಲಯದ ಕ್ರಮದಿಂದಾಗಿ ಮೈದಾನವನ್ನು ಆಟಗಾರರಿಗೆ ಬಿಟ್ಟುಕೊಡದಿರಲು ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಮುಂದಾಗಿವೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನದ ಹಿಂದಷ್ಟೇ ವರದಿ ಮಾಡಿದ್ದು ನಿಜವೆಂಬಂತೆ ಇದು ಕಂಡುಬರುತ್ತಿದೆ ಎಂದು ಹೇಳಲಾಗಿದೆ.

ಅಂದಹಾಗೆ ಶನಿವಾರವಷ್ಟೇ ಎನ್. ಶ್ರೀನಿವಾಸನ್ ಹಾಗೂ ಇತ್ತೀಚೆಗಷ್ಟೇ ಪದಚ್ಯುತಗೊಂಡಿದ್ದ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಹಾಗೂ ಇನ್ನೂ ಕೆಲ ಕ್ರಿಕೆಟ್ ಆಡಳಿತಾಧಿಕಾರಿಗಳು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ನಡೆಸಿ ಲೋಧಾ ಸಮಿತಿ ಶಿಫಾರಸು ಕುರಿತಂತೆ ಚರ್ಚಿಸಿದ್ದರು.

click me!