2019ರ ಐಪಿಎಲ್ ಟೂರ್ನಿಗೆ ಅಡೆ ತಡೆಗಳು ಒಂದೆರೆಡಲ್ಲ. ಲೋಕಸಭಾ ಚುನಾವಣೆಯಿಂದ ಐಪಿಎಲ್ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ, ಮುಂಬೈನಲ್ಲಿ ಪಂದ್ಯ ಆಯೋಜನೆ ಬಿಸಿಸಿಐಗೆ ತಲೆನೋವಾಗಿ ಪರಿಣಿಸಿದೆ.
ಮುಂಬೈ(ಫೆ.06): ಪ್ರತಿ ಆವೃತ್ತಿ ಐಪಿಎಲ್ ಟೂರ್ನಿ ಆಯೋಜನೆ ಬಿಸಿಸಿಐಗೆ ಸವಾಲಾಗಿ ಪರಿಣಮಿಸುತ್ತಿದೆ. ಅದರಲ್ಲೂ ಮುಂಬರುವ 12ನೇ ಆವೃತ್ತಿ ಕುರಿತು ಇನ್ನು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐಗೆ ಸಾಧ್ಯವಾಗುತ್ತಿಲ್ಲ. ಲೋಕಸಭಾ ಚುನಾವಣೆ ಹಾಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ, ಪ್ರತಿಷ್ಠಿತ ಐಪಿಎಲ್ ಟೂರ್ನಿ ಆಯೋಜನೆಗೆ ಕಷ್ಟವಾಗುತ್ತಿದೆ.
ಲೋಕಸಭಾ ಚುನಾವಣೆ ಸಂಕಷ್ಟದ ಜೊತೆಗೆ ಇದೀಗ ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದ 900 ಗ್ರಾಮಗಳು ತೀವ್ರ ಬರ ಪರಿಸ್ಛಿತಿ ಎದುರಿಸುತ್ತಿದೆ. ಮಹಾರಾಷ್ಟ್ರ ಸರ್ಕಾರ ಬರ ನಿರ್ವಹಣೆಗೆ ಕೇಂದ್ರದ ಸಹಾಯ ಕೋರಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಮುಂಬೈನ ವಾಂಖೆಡೆಯಲ್ಲಿ ಐಪಿಎಲ್ ಪಂದ್ಯ ಆಯೋಜಿಸಲು ವಿರೋಧ ಎದುರಾಗೋ ಸಾಧ್ಯತೆ ಇದೆ.
2016ರಲ್ಲಿ ಬರ ಪರಿಸ್ಥಿತಿಯಿಂದಾಗಿ ಮುಂಬೈ ಇಂಡಿಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳು ಕೇವಲ 5 ಪಂದ್ಯ ಮಾತ್ರ ಆಯೋಜಿಸಿತ್ತು. ಇದೀಗ 2019ರಲ್ಲೂ ಇದೇ ಪರಿಸ್ಥಿತಿ ಎದುರಾಗೋ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಕೂಡ 154 ತಾಲೂಕುಗಳಲ್ಲಿ ನೀರಿನ ಬರ ಇದೆ ಎಂದು ಘೋಷಿಸಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಮಳೆ ನೀರು ಸಂಗ್ರಹಣೆ ಸೇರಿದಂತೆ ತನ್ನದೇ ಆದ ನೀರಿನ ವ್ಯವಸ್ಥೆ ಮಾಡಿಕೊಂಡಿದೆ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆ ಯಾವುದೇ ಸಮಸ್ಯೆ ಇಲ್ಲ.