ಪ್ರೊ ಕಬಡ್ಡಿ 7ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ| ಟೂರ್ನಿಯ 2ನೇ ಅತಿ ದುಬಾರಿ ಆಟಗಾರನಾದ ಸಿದ್ಧಾರ್ಥ್ ದೇಸಾಯಿ| ನಿತಿನ್ ತೋಮರ್ ಗೆ 1.2ಕೋಟಿ ರೂಪಾಯಿ| ರಾಜ್ಯದ ತಾರಾ ಆಟಗಾರರಿಗೆ ನಿರಾಸೆ| ಇರಾನ್ ಆಟಗಾರರಿಗೆ ಮಣೆ ಹಾಕಿದ ಫ್ರಾಂಚೈಸಿಗಳು
ಸ್ಪಂದನ್ ಕಣಿಯಾರ್
ಮುಂಬೈ[ಏ.09]: ಪ್ರೊ ಕಬಡ್ಡಿಯ ಹೊಸ ಪೋಸ್ಟರ್ ಬಾಯ್ ಸಿದ್ಧಾರ್ಥ್ ದೇಸಾಯಿ, ಕೋಟ್ಯಧಿಪತಿಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಯು ಮುಂಬಾ ಪರ ಆಡಿ ಧೂಳೆಬ್ಬಿಸಿದ್ದ ಸಿದ್ಧಾರ್ಥ್‌ರನ್ನು ಸೋಮವಾರ ಇಲ್ಲಿ ನಡೆದ 7ನೇ ಆವೃತ್ತಿ ಆಟಗಾರರ ಹರಾಜಿನಲ್ಲಿ ತೆಲುಗು ಟೈಟಾನ್ಸ್ ಬರೋಬ್ಬರಿ ₹1.45 ಕೋಟಿಗೆ ಖರೀದಿಸಿತು. ಮಹಾರಾಷ್ಟ್ರ ಆಟಗಾರ ಪ್ರೊ ಕಬಡ್ಡಿ ಇತಿಹಾಸದಲ್ಲಿ 2ನೇ ದುಬಾರಿ ಆಟಗಾರ ಎನ್ನುವ ದಾಖಲೆ ಬರೆದರು.
ಹರಾಜು ಆರಂಭಗೊಳ್ಳುವ ಮೊದಲೇ ಸಿದ್ಧಾರ್ಥ್‌ಗೆ ಗರಿಷ್ಠ ಮೊತ್ತ ಸಿಗಲಿದೆ ಎನ್ನುವುದನ್ನು ಎಲ್ಲರೂ ಊಹಿಸಿದ್ದರು. ₹30 ಲಕ್ಷ ಮೂಲ ಬೆಲೆ ಹೊಂದಿದ್ದ ಸಿದ್ಧಾರ್ಥ್ ಹೆಸರು ಹರಾಜಿಗೆ ಬರುತ್ತಿದ್ದಂತೆ ತೆಲುಗು ಟೈಟಾನ್ಸ್ ₹1 ಕೋಟಿಗೆ ಬಿಡ್ ಮಾಡಿತು. ಪುಣೇರಿ ಪಲ್ಟನ್ ಹಾಗೂ ತೆಲುಗು ಟೈಟಾನ್ಸ್, ಸಿದ್ಧಾರ್ಥ್‌ರನ್ನು ಖರೀದಿಸಲು ಪೈಪೋಟಿಗೆ ಬಿದ್ದವು. ಅಂತಿಮವಾಗಿ ಸಿದ್ಧಾರ್ಥ್ ತೆಲುಗು ತಂಡದ ಪಾಲಾದರು
ಸೋಮವಾರ ವಿದೇಶಿ ಆಟಗಾರರು, ಭಾರತೀಯ ‘ಎ’ ಹಾಗೂ ‘ಬಿ’ ದರ್ಜೆ ಆಟಗಾರರ ಹರಾಜು ನಡೆಸಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ರೈಡರ್‌ಗಳಿಗೆ ತಂಡಗಳು ಹೆಚ್ಚು ಪ್ರಾಮುಖ್ಯತೆ ನೀಡಿದವು. ಕೆಲ ತಾರಾ ಡಿಫೆಂಡರ್‌ಗಳು ದೊಡ್ಡ ಮೊತ್ತಕ್ಕೆ ಬಿಕರಿಯಾದರು. ಪ್ರೊ ಕಬಡ್ಡಿಯಲ್ಲಿ ಮಿಂಚಿ ಮನೆ ಮಾತಾಗಿದ್ದ ಕಾಶಿಲಿಂಗ್ ಅಡಕೆ, ಜಸ್ವೀರ್ ಸಿಂಗ್ ಸೇರಿ ಇನ್ನೂ ಹಲವರು ಬಿಕರಿಯಾಗದೆ ಉಳಿದಿದ್ದು ಅಚ್ಚರಿಗೆ ಕಾರಣವಾಯಿತು. ಮೊದಲ ದಿನದ ಹರಾಜಿನಲ್ಲಿ ಒಟ್ಟು 59 ಆಟಗಾರರು ಬಿಕರಿಯಾದರು. ಮಂಗಳವಾರವೂ ಹರಾಜು ಪ್ರಕ್ರಿಯೆ ಮುಂದುವರಿಯಲಿದ್ದು, ‘ಸಿ’ ಹಾಗೂ ‘ಡಿ’ದರ್ಜೆ ಆಟಗಾರರನ್ನು ಖರೀದಿಸುವ ಅವಕಾಶವಿರಲಿದೆ.