
ಮೊಹಾಲಿ[ಏ.08]: ಕನ್ನಡಿಗರಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್’ವಾಲ್ ಭರ್ಜರಿ ಶತಕದ ಜತೆಯಾಟದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ.
ಹೈದರಾಬಾದ್ ನೀಡಿದ್ದ 151 ರನ್’ಗಳ ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ್ದ ಪಂಜಾಬ್ ಮೊದಲಿಗೆ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಗೇಲ್ ತಲಾ ಒಂದು ಸಿಕ್ಸರ್, ಬೌಂಡರಿ ಸಹಿತ 16 ರನ್ ಬಾರಿಸಿ ರಶೀದ್ ಖಾನ್’ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಎರಡನೇ ವಿಕೆಟ್’ಗೆ ಜತೆಯಾದ ಕೆ.ಎಲ್ ರಾಹುಲ್-ಮಯಾಂಕ್ ಅಗರ್’ವಾಲ್ ಜೋಡಿ ಬಲಿಷ್ಠ ಸನ್’ರೈಸರ್ಸ್ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿತು. ಎರಡನೇ ವಿಕೆಟ್’ಗೆ ಈ ಜೋಡಿ 114 ರನ್ ಜತೆಯಾಟವಾಡುವ ಮೂಲಕ ಪಂಜಾಬ್ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು. ಅಗರ್’ವಾಲ್ 43 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸಹಿತ 55 ರನ್ ಬಾರಿಸಿ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಕೆ.ಎಲ್ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ ಹಾಗೂ 01 ಸಿಕ್ಸರ್ ಸಹಿತ ಅಜೇಯ 71 ರನ್ ಸಿಡಿಸಿದರು.
ನಾಟಕೀಯ ತಿರುವು: ಒಂದು ಹಂತದಲ್ಲಿ 130 ರನ್’ಗಳಿಗೆ 1 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ಸಮೀಪ ದಾವಿಸಿದ್ದ ಪಂಜಾಬ್ ಅಗರ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ನಾಟಕೀಯ ಕುಸಿತ ಕಂಡಿತು. ಡೇವಿಡ್ ಮಿಲ್ಲರ್[1] ಹಾಗೂ ಮನ್ದೀಪ್ ಸಿಂಗ್[2] ಬೇಗನೇ ವಿಕೆಟ್ ಒಪ್ಪಿಸಿದ್ದರಿಂದ ಕೊನೆಯ ಓವರ್’ನಲ್ಲಿ ಗೆಲ್ಲಲು ಪಂಜಾಬ್’ಗೆ 11 ರನ್’ಗಳ ಅವಶ್ಯಕತೆಯಿತ್ತು. ಈ ವೇಳೆ ಎಚ್ಚರಿಕೆಯ ಆಟವಾಡಿದ ಕುರಾನ್-ರಾಹುಲ್ ಜೋಡಿ ಇನ್ನೊಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್’ರೈಸರ್ಸ್ ಹೈದರಾಬಾದ್ ತಂಡವು ಸನ್’ರೈಸರ್ಸ್ ಆರಂಭದಲ್ಲೇ ವಿಕೆಟ್’ಕೀಪರ್ ಬ್ಯಾಟ್ಸ್'ಮನ್ ಜಾನಿ ಬೇರ್’ಸ್ಟೋ[01] ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ವಾರ್ನರ್-ವಿಜಯ್ ಶಂಕರ್ ಜೋಡಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ಶಂಕರ್ 27 ಎಸೆತಗಳಲ್ಲಿ 26 ರನ್ ಬಾರಿಸಿ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. ನಬಿ 12 ರನ್ ಬಾರಿಸಿದರೆ, ಮನೀಶ್ ಪಾಂಡೆ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮಂದಗತಿಯಲ್ಲೇ ಬ್ಯಾಟಿಂಗ್ ನಡೆಸಿದ ವಾರ್ನರ್ 62 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 70 ರನ್ ಬಾರಿಸಿ ಅಜೇಯರಾಗುಳಿದರೆ, ಕೊನೆಯಲ್ಲಿ ದೀಪಕ್ ಹೂಡಾ 3 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 14 ರನ್ ಚಚ್ಚಿ ತಂಡದ ಮೊತ್ತವನ್ನು 150ರ ಗಡಿ ಮುಟ್ಟಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.