
ನವದೆಹಲಿ(ನ.11): ಹದಿನೇಳು ವರ್ಷದ ಹೈಜಂಪರ್ ತೇಜಸ್ವಿನ್ ಶಂಕರ್, ಕೊಯಮತ್ತೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ಹಿರಿಯರ ವಿಭಾಗದ ಹೈಜಂಪ್‌ನಲ್ಲಿ ಅವಕಾಶ ಪಡೆದ ತೇಜಸ್ವಿನ್, ಸ್ಪರ್ಧೆಯ ತಮ್ಮ ಎರಡನೇ ಜಿಗಿತದ ವೇಳೆ 2.26 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ಸ್ವರ್ಣ ಪದಕ ಗಳಿಸಿದರಲ್ಲದೆ, 2004ರಲ್ಲಿ ಪಶ್ಚಿಮ ಬಂಗಾಳದ ಹೈಜಂಪರ್ ಹರಿಶಂಕರ್ ರಾಯ್ ಅವರು ಸಿಂಗಾಪುರದಲ್ಲಿ ನಡೆದಿದ್ದ ಏಷ್ಯನ್ ಆಲ್ ಸ್ಟಾರ್ಸ್ ಮೀಟ್‌ನಲ್ಲಿ 2.25 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿಗೆ ಬದಲಿಸಿಕೊಂಡರು. ಈ ಕ್ರೀಡಾಕೂಟದಲ್ಲಿ ಅವರು ತೋರಿರುವ ಸಾಧನೆ ಅವರನ್ನು ವಿಶ್ವ ಮಟ್ಟದಲ್ಲಿ 20 ವರ್ಷದೊಳಗಿನವರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ತಂದುಕೊಟ್ಟಿದೆ.
ತಮ್ಮ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ತೇಜಸ್ವಿನ್, ‘‘ವಾಹನ ಅಪಘಾತದಲ್ಲಿ ಗಾಯಗೊಂಡಿದ್ದರಿಂದಾಗಿ ಇದೇ ವರ್ಷದಾರಂಭದಲ್ಲಿ ಪೋಲೆಂಡ್‌ನಲ್ಲಿ ನಡೆದಿದ್ದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕಾಲಿಡುವ ಅವಕಾಶದಿಂದ ವಂಚಿತನಾಗಿದ್ದೆ. ಚೇತರಿಕೆ ಕಂಡ ಮೇಲೆ ಈ ವರ್ಷ ಏನಾದರೂ ಸಾಸಬೇಕೆಂದು ಪಣ ತೊಟ್ಟಿದ್ದೆ. ಅಲ್ಲದೆ, ಅದ್ಕಕಾಗಿ ಪರಿಶ್ರಮವನ್ನೂ ಪಟ್ಟಿದ್ದೆ’’ ಎಂದಿದ್ದಾರೆ.
ಯೂ ಟ್ಯೂಬ್‌ನಲ್ಲಿ ಹೈಜಂಪ್ ನೋಡುತ್ತಲೇ ಕ್ರೀಡೆಯ ಬಗ್ಗೆ ಆಸಕ್ತಿ ಗಳಿಸಿದ ತೇಜಸ್ವಿನ್, ಈ ಹಿಂದೆ ಕಿರಿಯರ ಕ್ರೀಡಾಕೂಟಗಳಲ್ಲಿ 2.06, 2,12, 2.18 ಮತ್ತು 2.21 ಮೀಟರ್‌ಗಳಷ್ಟು ಎತ್ತರಕ್ಕೆ ಜಿಗಿಯುವ ಮೂಲಕ ಗಮನ ಸೆಳೆದಿದ್ದರು. ಇತ್ತೀಚೆಗೆ, 2.17 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ಕಿರಿಯರ ವಿಭಾಗದಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.