
ನವದೆಹಲಿ[ಜು.18]: ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ ಭವಿಷ್ಯ ಶುಕ್ರವಾರ ನಿರ್ಧಾರವಾಗುವ ಸಾಧ್ಯತೆ ಇದೆ. ಮುಂಬೈನಲ್ಲಿ ಸಭೆ ಸೇರಲಿರುವ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ, ಆಗಸ್ಟ್ 3ರಿಂದ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ತಂಡದಲ್ಲಿ ಧೋನಿಗೆ ಸ್ಥಾನ ಸಿಗಲಿದೆಯೇ ಇಲ್ಲವೇ ಎನ್ನುವ ಬಗ್ಗೆ ಭಾರೀ ಕುತೂಹಲ ಶುರುವಾಗಿದೆ.
"
ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎನ್ನುವ ವದಂತಿ ಹಬ್ಬಿದ್ದು, ಅವರ ನಿವೃತ್ತಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಶ್ವಕಪ್‌ನಲ್ಲಿ ಧೋನಿ ಬ್ಯಾಟಿಂಗ್ ಲಯದ ಬಗ್ಗೆ ಹಲವರು ಟೀಕಿಸಿದ್ದರು. ಅವರ ನಿಧಾನಗತಿಯ ಬ್ಯಾಟಿಂಗ್ ಅನ್ನು ಸ್ವತಃ ಸಚಿನ್ ತೆಂಡುಲ್ಕರ್ ಸಹ ಪ್ರಶ್ನಿಸಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಮಾತ್ರ, ತಮ್ಮ ಹಿರಿಯ ಸಹ ಆಟಗಾರನ ಬೆನ್ನಿಗೆ ನಿಂತಿದ್ದರು. ‘ಧೋನಿ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಮಾಡುತ್ತಿದ್ದಾರೆ. ಈಗಲೂ ತಂಡಕ್ಕೆ ಅವರ ಕೊಡುಗೆ ಅಪಾರವಾಗಿದೆ’ ಎಂದಿದ್ದರು.
ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!
ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತ ಬಳಿಕ, ಧೋನಿ ನಿವೃತ್ತಿ ವದಂತಿ ಮತ್ತಷ್ಟು ಜೋರಾಗಿದೆ. 2020ರ ಟಿ20 ವಿಶ್ವಕಪ್ ವರೆಗೂ ಅವರು ತಂಡದಲ್ಲಿ ಉಳಿದುಕೊಳ್ಳುವುದು ಕಷ್ಟ. ಹೀಗಾಗಿ, ಯುವ ಆಟಗಾರ ರಿಷಭ್ ಪಂತ್‌ಗೆ ದಾರಿ ಮಾಡಿಕೊಟ್ಟು ಧೋನಿ ನಿವೃತ್ತಿ ಪಡೆಯಬೇಕು ಎನ್ನುವ ಅಭಿಪ್ರಾಯಗಳು ಸಹ ವ್ಯಕ್ತವಾಗಿವೆ.
ತವರಿಗೆ ಮರಳದ ಧೋನಿ?: ಏಕದಿನ ವಿಶ್ವಕಪ್‌ನಲ್ಲಿ ಭಾರತ ಕೊನೆ ಪಂದ್ಯ ಧೋನಿಯ ಕೊನೆ ಪಂದ್ಯ ಸಹ ಹೌದು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅವರಿನ್ನೂ ತವರಿಗೆ ವಾಪಸಾಗಿಲ್ಲ. ಜತೆಗೆ ತಮ್ಮ ನಿರ್ಧಾರದ ಬಗ್ಗೆ ತಂಡದ ಆಡಳಿತಕ್ಕೆ ಇಲ್ಲವೇ ಬಿಸಿಸಿಐಗೆ ಯಾವುದೇ ಮಾಹಿತಿ ರವಾನಿಸಿಲ್ಲ. ನಿಗೂಢತೆ ಕಾಪಾಡಿಕೊಂಡಿರುವ ಧೋನಿ, ಆಯ್ಕೆ ಸಮಿತಿ ಸಭೆ ಸೇರುವ ಮುನ್ನ ತಮ್ಮ ನಿರ್ಧಾರವನ್ನು ತಿಳಿಸುತ್ತಾರಾ ಎನ್ನುವ ಪ್ರಶ್ನೆ ಬಿಸಿಸಿಐ ಅಧಿಕಾರಿಗಳನ್ನೂ ಕಾಡುತ್ತಿದೆ.
ಶುಕ್ರವಾರ ಬಿಸಿಸಿಐ ತಂಡ ಪ್ರಕಟಿಸುವ ವೇಳೆ, ಧೋನಿಯ ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಕೊನೆ ಪಕ್ಷ ಸಣ್ಣ ಸುಳಿವಾದರೂ ಸಿಗಲಿದೆ. ಒಂದೊಮ್ಮೆ ಅವರು ತಂಡದಲ್ಲಿ ಇನ್ನೂ ಕೆಲ ಕಾಲ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರೆ, ವಿಂಡೀಸ್ ಪ್ರವಾಸಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ. 12ನೇ ಆವೃತ್ತಿ ಐಪಿಎಲ್ ಆರಂಭವಾದಾಗಿನಿಂದಲೂ ಧೋನಿ ನಿರಂತರ ಕ್ರಿಕೆಟ್ ಆಡಿ ದಣಿದಿದ್ದಾರೆ.
ರಿಷಭ್‌ಗೆ ಮಾರ್ಗದರ್ಶನ?: ರಾಷ್ಟ್ರೀಯ ಮಾಧ್ಯಮವೊಂದರ ವರದಿ ಪ್ರಕಾರ, ಧೋನಿ ತಂಡದಲ್ಲಿ ಮುಂದುವರಿಯಲು ಇಚ್ಛಿಸಿದರೂ ಭಾರತ ಆಡುವ ಪ್ರತಿ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ. ಕೊಹ್ಲಿ ಜತೆಗಿದ್ದು ಅವರಿಗೆ ನಾಯಕತ್ವದ ಪಾಠ ಮಾಡಿದ ರೀತಿ, ರಿಷಭ್ ಪಂತ್‌ಗೂ ಕೆಲ ದಿನಗಳ ಕಾಲ ಮಾರ್ಗದರ್ಶನ ಮಾಡಲಿದ್ದಾರೆ ಎನ್ನಲಾಗಿದೆ. ಪಂತ್ ತಮ್ಮ ಮೇಲಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುವ ನಂಬಿಕೆ ಬಂದ ಮೇಲೆ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೊಹ್ಲಿ ಜತೆ ಧೋನಿ ಚರ್ಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.