ವಿಂಡೀಸ್‌ ಪ್ರವಾಸಕ್ಕೆ ಧೋನಿಗಿಲ್ಲ ಸ್ಥಾನ?

By Web Desk  |  First Published Jul 13, 2019, 1:10 PM IST

ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ವಿಂಡೀಸ್ ವಿರುದ್ಧದ ಸರಣಿಗೆ ಧೋನಿಗೆ ವಿಶ್ರಾಂತಿ ನೀಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ಮುಂಬೈ[ಜು.13]: ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋಲುಂಡು ತವರಿಗೆ ಹಿಂದಿರುಗಲು ಸಿದ್ಧತೆ ನಡೆಸಿರುವ ಭಾರತ ತಂಡ, 2 ವಾರಗಳ ವಿಶ್ರಾಂತಿ ಬಳಿಕ ವೆಸ್ಟ್‌ಇಂಡೀಸ್‌ಗೆ ತೆರಳಲಿದೆ. ಜು.17 ಇಲ್ಲವೇ 18ಕ್ಕೆ ಇಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಲಿದ್ದು, ತಂಡ ಆಯ್ಕೆ ಮಾಡಲಿದೆ. 

ಟೀಂ ಇಂಡಿಯಾ ವಿಂಡೀಸ್‌ ಪ್ರವಾಸ: ವೇಳಾಪಟ್ಟಿ ಪ್ರಕಟ

Latest Videos

undefined

ಮಾಜಿ ನಾಯಕ ಎಂ.ಎಸ್‌.ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆಯಾದರೂ, ಸ್ವತಃ ಬಿಸಿಸಿಐಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಧೋನಿಯಿಂದಲೇ ಮಾಹಿತಿ ಪಡೆದುಕೊಳ್ಳಲು ಕಾಯುತ್ತಿರುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಧೋನಿ ನಿವೃತ್ತಿ ನಿರ್ಧಾರ ಕೈಗೊಳ್ಳದಿದ್ದರೂ ವಿಂಡೀಸ್‌ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ. ಐಪಿಎಲ್‌ ಸೇರಿದಂತೆ 3 ತಿಂಗಳಿಂದ ನಿರಂತರ ಕ್ರಿಕೆಟ್‌ ಆಡಿರುವ ಧೋನಿಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗಿದೆ.

ವಿಶ್ವಕಪ್‌ ಸೆಮೀಸ್‌ನಲ್ಲೇ ಸೋಲು: ಕೊಹ್ಲಿ, ಶಾಸ್ತ್ರಿಗೆ ಬಿಸಿಸಿಐ ಚಾಟಿ?

ಕೊಹ್ಲಿ, ಬುಮ್ರಾಗೂ ವಿಶ್ರಾಂತಿ?: ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಲಿದ್ದು, ಬಳಿಕ ಆಸ್ಪ್ರೇಲಿಯಾ ವಿರುದ್ಧ ಸರಣಿಯೂ ಇದೆ. ವರ್ಷಾಂತ್ಯದಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಇರುವ ಕಾರಣ, ಐಪಿಎಲ್‌ ಸೇರಿದಂತೆ ನಿರಂತರವಾಗಿ ಕ್ರಿಕೆಟ್‌ ಆಡುತ್ತಿರುವ ನಾಯಕ ವಿರಾಟ್‌ ಕೊಹ್ಲಿ, ವೇಗಿಗಳಾದ ಜಸ್ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಸೀಮಿತ ಓವರ್‌ ಸರಣಿಯಲ್ಲಿ ರೋಹಿತ್‌ ಶರ್ಮಾ ತಂಡ ಮುನ್ನಡೆಸಲಿದ್ದು, ಟೆಸ್ಟ್‌ ಸರಣಿಗೆ ಕೊಹ್ಲಿ ತಂಡಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಭಾರತ ‘ಎ’ ತಂಡ, ವಿಂಡೀಸ್‌ ಪ್ರವಾಸದಲ್ಲಿದೆ. ಖಲೀಲ್‌ ಅಹ್ಮದ್‌, ಮನೀಶ್‌ ಪಾಂಡೆ, ಶುಭ್‌ಮನ್‌ ಗಿಲ್‌, ದೀಪಕ್‌ ಚಹರ್‌, ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಅವರನ್ನೇ ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20, ಏಕದಿನ ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
 

click me!