ಐತಿಹಾಸಿಕ 100ನೇ ಟೆಸ್ಟ್'ನಲ್ಲಿ ಬಾಂಗ್ಲಾ ಹುಲಿಗಳ ಘರ್ಜನೆ

By Suvarna Web DeskFirst Published Mar 19, 2017, 12:25 PM IST
Highlights

191 ರನ್ ಬೆನ್ನತ್ತಿದ ಬಾಂಗ್ಲಾ ಪಡೆ 6 ವಿಕೆಟ್ ಕಳೆದುಕೊಂಡು ಐತಿಹಾಸಿಕ ಜಯಭೇರಿ ಬಾರಿಸಿತು. ಇಕ್ಬಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ಮಿಂಚಿದ ಶಕೀಬ್ ಸರಣಿ ಸರ್ವೋತ್ತಮ ಪ್ರಶಸ್ತಿ ಬಾಚಿಕೊಂಡರು.

ಕೊಲೊಂಬೊ(ಮಾ.19): ಶ್ರೀಲಂಕಾ ನಾಯಕ ಹಂಗನಾ ಹೆರಾತ್ ಎಸೆತವನ್ನು ಶಾರ್ಟ್ ಫೈನ್ ಲೆಗ್‌'ಗೆ ಅಟ್ಟಿದ ಮೆಹದಿ ಹಸನ್ ಮಿರಾಜ್ ಎರಡು ರನ್ ಕದಿಯುತ್ತಿದ್ದಂತೆ, ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್‌'ನಲ್ಲಿ ಇತಿಹಾಸವೊಂದು ನಿರ್ಮಾಣವಾಯ್ತು. ಇಲ್ಲಿನ ಪಿ.ಸಾರಾ ಓವಲ್‌'ನಲ್ಲಿ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವಾಡಿದ ಬಾಂಗ್ಲಾ, 4 ವಿಕೆಟ್ ರೋಚಕ ಗೆಲುವು ಸಂಪಾದಿಸಿ 1-1ರಲ್ಲಿ ಸಮಬಲ ಸಾಧಿಸುವುದರ ಜತೆಗೆ ಕ್ರಿಕೆಟ್ ಲೋಕಕ್ಕೆ ಅಚ್ಚರಿ ನೀಡಿತು.

2000ನೇ ಇಸವಿಯಲ್ಲಿ ಟೆಸ್ಟ್ ಮಾನ್ಯತೆ ಪಡೆದ ಬಾಂಗ್ಲಾದೇಶ ‘ಭಾರತ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಮೊದಲ ಪಂದ್ಯದಲ್ಲೇ ಆಕರ್ಷಕ ಪ್ರದರ್ಶನ ನೀಡಿದ ಹೊರತಾಗಿಯೂ ಸೋಲಿಗೆ ಶರಣಾಗಿ ನಿರಾಸೆ ಅನುಭವಿಸಿದ್ದ ಬಾಂಗ್ಲಾಕ್ಕೆ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಲು 16 ವರ್ಷಗಳೇ ಬೇಕಾಯಿತು. ಈ ಗೆಲುವಿನ ಮೂಲಕ 100ನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದ 4ನೇ ತಂಡ ಅನ್ನುವ ಹಿರಿಮೆಗೆ ಪಾತ್ರವಾಯಿತು. ಈ ಮೊದಲು ಆಸ್ಟ್ರೇಲಿಯಾ, ವೆಸ್ಟ್‌'ಇಂಡೀಸ್ ಹಾಗೂ ಪಾಕಿಸ್ತಾನ 100ನೇ ಟೆಸ್ಟ್‌ನಲ್ಲಿ ಜಯಿಸಿದ್ದವು. 100 ಟೆಸ್ಟ್‌'ಗಳಲ್ಲಿ ಬಾಂಗ್ಲಾಗಿದು 9ನೇ ಜಯ. 9ರಲ್ಲಿ 6 ಗೆಲುವು ಮುಷಿಕರ್ ನಾಯಕತ್ವದಲ್ಲೇ ದಾಖಲಾಗಿರುವುದು ವಿಶೇಷ.

ಬಾಂಗ್ಲಾ ತಂಡದಲ್ಲಿ ನವೋಲ್ಲಾಸ!

ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟು ಹತ್ತಿರತ್ತಿರ 17 ವರ್ಷಗಳೇ ಕಳೆದರೂ, ಬಾಂಗ್ಲಾದೇಶವನ್ನು ಇನ್ನೂ ಕ್ರಿಕೆಟ್ ಶಿಶು ಅಂತಲೇ ಪರಿಗಣಿಸಲಾಗುತ್ತೆ. ಆದರೆ ಶ್ರೀಲಂಕಾ ವಿರುದ್ಧ ಈ ಐತಿಹಾಸಿಕ ಗೆಲುವು ಬಾಂಗ್ಲಾ ಕ್ರಿಕೆಟ್‌'ನಲ್ಲಿ ನವಚೈತನ್ಯ ಮೂಡಿಸಿದೆ. ಕಳೆದ 3-4 ವರ್ಷಗಳಲ್ಲಿ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಅಸಾಧಾರಣ ಯಶಸ್ಸು ಸಾಧಿಸಿರುವ ಬಾಂಗ್ಲಾದೇಶ, ಇದೀಗ ಟೆಸ್ಟ್ ಕ್ರಿಕೆಟ್‌'ನಲ್ಲೂ ತನ್ನ ಸಾಮರ್ಥ್ಯ ಸಾಬೀತು ಪಡಿಸಲು ಆರಂಭಿಸಿದೆ. ಇತ್ತೀಚೆಗಷ್ಟೇ ಚೊಚ್ಚಲ ಬಾರಿಗೆ ‘ಭಾರತದ ನೆಲದಲ್ಲಿ ಟೆಸ್ಟ್ ಆಡಿದ್ದ ಬಾಂಗ್ಲಾ, ಸೋಲು ಅನು‘ವಿಸಿದರೂ, ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ತಂಡ ದಿನೇಶ್ ಚಾಂಡಿಮಲ್ ಅವರ ಅಮೋಘ ಶತಕದ (138 ರನ್) ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 338 ರನ್‌'ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು. ಇದಕ್ಕುತ್ತರವಾಗಿ ಬಾಂಗ್ಲಾದೇಶ 467 ರನ್ ಗಳಿಸಿ ಲಂಕಾಗೆ ಆಘಾತ ಉಂಟು ಮಾಡಿತು. ಪ್ರವಾಸಿ ತಂಡದ ಪರ ಶಕೀಬ್ ಅಲ್ ಹಸನ್(116) ರನ್ ಗಳಿಸಿ ಮಿಂಚಿದರು. 129 ರನ್‌'ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 319 ರನ್‌'ಗಳಿಗೆ ಸರ್ವಪತನಗೊಂಡಿತು. ದಿಮುತ್ ಕರುಣರತ್ನೆ (126), ದಿಲ್ರುವನ್ ಪೆರೇರಾ (50) ರನ್ ಗಳಿಸಿ ಸವಾಲಿನ ಗುರಿ ನೀಡುವಲ್ಲಿ ಸಹಕಾಯರಾದರು.

ಇನ್ನು 191 ರನ್ ಬೆನ್ನತ್ತಿದ ಬಾಂಗ್ಲಾ ಪಡೆ 6 ವಿಕೆಟ್ ಕಳೆದುಕೊಂಡು ಐತಿಹಾಸಿಕ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ ತಮೀಮ್ ಇಕ್ಬಾಲ್(82) ಹಾಗೂ ಶಬ್ಬೀರ್ ರೆಹಮಾನ್(41) ಬಾಂಗ್ಲಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಕ್ಬಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ಮಿಂಚಿದ ಶಕೀಬ್ ಸರಣಿ ಸರ್ವೋತ್ತಮ ಪ್ರಶಸ್ತಿ ಬಾಚಿಕೊಂಡರು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ ಮೊದಲ ಇನ್ನಿಂಗ್ಸ್: 338/10

(ಚಾಂಡಿಮಲ್ 138, ಲಕ್ಮಾಲ್ 35, ಮೆಹದಿ ಹಸನ್ 90/3).

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್: 467

(ಶಕೀಬ್ 116, ಮೊಹದೆಕ್ 75, ಹೆರಾತ್ 82/4).

 ಶ್ರೀಲಂಕಾ 2ನೇ ಇನ್ನಿಂಗ್ಸ್: 319/10

(ಕರುಣರತ್ನೆ 126, ಪೆರೇರಾ 50, ಶಕೀಬ್ 74/4).

ಬಾಂಗ್ಲಾದೇಶ 2ನೇ ಇನ್ನಿಂಗ್ಸ್: 191/6

(ತಮೀಮ್ 82, ಸಬೀರ್ 41, ಪೆರೇರಾ 59ಕ್ಕೆ 3).

click me!