ರಣಜಿ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ಅನುಭವಿಸಿದ್ದ ಸೋಲನ್ನು ಮರೆಸುವಂತಹ ಪ್ರದರ್ಶನವನ್ನು ಕರ್ನಾಟಕ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನೀಡಿದೆ. ಕರ್ನಾಟಕ ಚೊಚ್ಚಲ ಟಿ20 ಸರಣಿ ಗೆದ್ದು ಸಂಭ್ರಮಿಸಿದೆ.
ಇಂದೋರ್(ಮಾ.15): ರೋಹನ್ ಕದಂ ಹಾಗೂ ಮಯಾಂಕ್ ಅಗರ್‌ವಾಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ಚೊಚ್ಚಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಕಿರೀಟ ಮುಡಿಗೇರಿಸಿಕೊಂಡಿತು. ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದ ಮನೀಷ್ ಪಾಂಡೆ ಪಡೆ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿತು. ಇದರೊಂದಿಗೆ ರಣಜಿ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ಅನುಭವಿಸಿದ್ದ ಸೋಲನ್ನು ಮೀರಿನಿಂತಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ಅಭಿಮನ್ಯು ಮಿಥುನ್, ಕೆ.ಸಿ.ಕರಿಯಪ್ಪ ಅವರ ಅತ್ಯಾಕರ್ಷಕ ಬೌಲಿಂಗ್ ನೆರವಿನಿಂದ ಮಹಾರಾಷ್ಟ್ರ ತಂಡವನ್ನು 4 ವಿಕೆಟ್ ನಷ್ಟಕ್ಕೆ 155 ರನ್‌ಗಳಿಗೆ ಕಟ್ಟಿಹಾಕಿತು. 55 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಮಹಾರಾಷ್ಟ್ರಗೆ 69 ರನ್ ಗಳಿಸುವ ಮೂಲಕ ನೌಶಾದ್ ಶೇಖ್ ಆಸರೆಯಾದರು.
ಸವಾಲಿನ ಗುರಿಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಬೆನ್ನತ್ತಿದ್ದ ಕರ್ನಾಟಕ ಆರಂಭಿಕ ಆಘಾತಕ್ಕೆ ಒಳಗಾಯಿತು. 2 ರನ್ ಗಳಿಸಿದ್ದ ಬಿ.ಆರ್.ಶರತ್, ಸಮದ್ ಫಲ್ಲಾಹ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಜತೆಗೂಡಿದ ರೋಹನ್ ಕದಂ ಹಾಗೂ ಮಯಾಂಕ್ ಅಗರ್‌ವಾಲ್ 2ನೇ ವಿಕೆಟ್‌ಗೆ 92 ರನ್ ಕೂಡಿ ಹಾಕುವ ಮೂಲಕ ತಂಡದ ಗೆಲುವನ್ನು ಖಚಿತ ಪಡಿಸಿದರು. ಎದುರಾಳಿ ಬೌಲರ್‌ಗಳ ಬೆವರಿಳಿಸಿದ ಉಭಯ ದಾಂಡಿಗರು ತಲಾ 6 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್ ಸಿಡಿಸಿದ್ದು ವಿಶೇಷವಾಗಿತ್ತು. 39 ಎಸೆತಗಳಲ್ಲಿ 60 ರನ್‌ಗಳಿಸಿದ್ದ ರೋಹನ್ ಕದಂ, ದಿವ್ಯಾಂಗ್ ಹಿಮ್ಮನೇಕರ್ ಬೌಲಿಂಗ್‌ನಲ್ಲಿ ವಿಜಯ್ ಜೋಲ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಮ್ಮ ಪ್ರಚಂಡ ಲಯವನ್ನು ಮುಂದುವರಿಸಿದ ಮಯಾಂಕ್ 57 ಎಸೆತಗಳಲ್ಲಿ 85 ರನ್ ಸಿಡಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. 8 ರನ್ ಗಳಿಸಿದ ಕರುಣ್ ನಾಯರ್ ಅಜೇಯರಾಗಿ ಉಳಿದರು. ಮಹಾರಾಷ್ಟ್ರ ಪರ ಫಲ್ಲಾಹ್, ಹಿಮ್ಮನೆಕರ್ ತಲಾ 1 ವಿಕೆಟ್ ಪಡೆದರು.
ನೌಶಾದ್ ಆಸರೆ: ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಮಹಾರಾಷ್ಟ್ರಕ್ಕೆ ಕರ್ನಾಟಕ ವೇಗಿ ಅಭಿಮನ್ಯು ಮಿಥುನ್ ಆಘಾತ ನೀಡಿದ್ದರು. 1 ಬೌಂಡರಿಯೊಂದಿಗೆ 12 ರನ್ ಗಳಿಸಿದ್ದ ಋುತುರಾಜ್ ಗಾಯಕ್‌ವಾಡ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಬಂದ ವಿಜಯ್ ಜೋಲ್ 7 ರನ್ ಗಳಿಸಲಷ್ಟೇ ಶಕ್ತರಾದರು. 30 ರನ್ ಗಳಿಸಿದ್ದ ರಾಹುಲ್ ತ್ರಿಪಾಠಿ ಕರಿಯಪ್ಪ ಬಲೆಗೆ ಬಿದ್ದರು. 55 ರನ್‌ಗಳಿಸುವಷ್ಟರಲ್ಲಿ ತಂಡದ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟರಲ್ಲಿ ಸಿಲುಕಿದ್ದ ಮಹಾರಾಷ್ಟ್ರಕ್ಕೆ ನೌಶಾದ್ ಶೇಖ್, ಅಂಕಿತ್ ಭಾವ್ನೆ ಆಸರೆಯಾದರು. 29 ರನ್ ಗಳಿಸಿದ್ದ ಭಾವ್ನೆ ಮಿಥುನ್ ಬೌಲಿಂಗ್‌ನಲ್ಲಿ 29 ರನ್ ಗಳಿಸಿದ್ದಾಗ ನಾಯರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಅಜೇಯ 69 ರನ್‌ಗಳಿಸಿದ ನೌಶಾದ್ ತಂಡದ ಮೊತ್ತ 150ರ ಗಡಿ ದಾಟಲು ಕಾರಣರಾದರು.