68 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಜಯಿಸಿ ಮುನ್ನಡೆ ಸಾಧಿಸಿದ ಪ್ರಣೀತ್, ನಂತರದ 2 ಗೇಮ್‌ಗಳನ್ನು ಕೈ ಚೆಲ್ಲುವ ಮೂಲಕ ಸೋಲು ಕಂಡರು. ನಿರ್ಣಾಯಕ ಗೇಮ್’ನಲ್ಲಿ ಕೊಂಚ ಎಡವಿದ್ದರಿಂದ ಸಾಯಿ ಪ್ರಣೀತ್ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.
ಬಸೆಲ್(ಸ್ವಿಜರ್‌ಲೆಂಡ್): ಭಾರತದ ತಾರಾ ಶಟ್ಲರ್ ಬಿ. ಸಾಯಿ ಪ್ರಣೀತ್, ಭಾನುವಾರ ಮುಕ್ತಾಯವಾದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಸೋಲುಂಡು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟರು.
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಪ್ರಣೀತ್, ಅಗ್ರ ಶ್ರೇಯಾಂಕಿತ ಆಟಗಾರ, ವಿಶ್ವ ನಂ.2 ಚೀನಾದ ಶೀ ಯೂಕಿ ವಿರುದ್ಧ 21-19, 18-21, 12-21 ಗೇಮ್‌ಗಳಲ್ಲಿ ಪರಾಭವಗೊಂಡರು. ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. 68 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಜಯಿಸಿ ಮುನ್ನಡೆ ಸಾಧಿಸಿದ ಪ್ರಣೀತ್, ನಂತರದ 2 ಗೇಮ್‌ಗಳನ್ನು ಕೈ ಚೆಲ್ಲುವ ಮೂಲಕ ಸೋಲು ಕಂಡರು. 2ನೇ ಗೇಮ್‌ನಲ್ಲಿ ಪ್ರಬಲ ಪೈಪೋಟಿ ಕಂಡುಬಂತು. 9-9 ರಲ್ಲಿ ಸಮಬಲ ಸಾಧಿಸಿದ ಬಳಿಕ, ಪ್ರಣೀತ್ ಸತತ 6 ಅಂಕ ಗಳಿಸಿ 15-6ರ ಮುನ್ನಡೆ ಪಡೆದರು. ಆದರೆ ತಿರುಗಿಬಿದ್ದ ಯೂಕಿ, ಆಕರ್ಷಕ ಹೊಡೆತಗಳ ಮೂಲಕ ಅಂಕಗಳನ್ನು ಹೆಕ್ಕುತ್ತಾ 3 ಅಂಕಗಳ ಅಂತರದಲ್ಲಿ ಗೇಮ್ ತಮ್ಮದಾಗಿಸಿಕೊಂಡರು. ಅಂತಿಮ ಗೇಮ್‌ನಲ್ಲಿ ಪ್ರಣೀತ್ ಸುಲಭ ಸೋಲು ಒಪ್ಪಿಕೊಂಡರು.
ಸೆಮಿಫೈನಲ್‌ನಲ್ಲಿ ಭಾರತೀಯ ಆಟಗಾರ ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಲಾಂಗ್ ವಿರುದ್ಧ ಜಯಿಸಿ ಅಚ್ಚರಿ ಮೂಡಿಸಿದ್ದರು. ಅಂತದ್ದೇ ಮತ್ತೊಂದು ಪ್ರದರ್ಶನವನ್ನು ವಿಶ್ವ ನಂ.22 ಆಟಗಾರನಿಂದ ನಿರೀಕ್ಷೆ ಮಾಡಲಾಗಿತ್ತು. ಉತ್ತಮ ಹೋರಾಟ ಪ್ರದರ್ಶಿಸಿದರಾದರೂ, ಪ್ರಣೀತ್ ಪ್ರಶಸ್ತಿ ಜಯಿಸುವಲ್ಲಿ ವಿಫಲರಾದರು.