WFI Election ವಿಳಂಬವೇಕೆ?: ಕೇಂದ್ರಕ್ಕೆ ಸುಪ್ರೀಂನಿಂದ ನೋಟಿಸ್‌

By Kannadaprabha News  |  First Published Oct 14, 2023, 4:53 PM IST

ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ಡಬ್ಲ್ಯುಎಫ್‌ಐ ಚುನಾವಣೆಗೆ ನೀಡಿರುವ ತಡೆ ತೆರವುಗೊಳಿಸುವಂತೆ ಐಒಎ ನೇಮಿತ ತಾತ್ಕಾಲಿಕ ಸಮಿತಿಯು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.


ನವದಹೆಲಿ(ಅ.14): ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆಗೆ ಆಗುತ್ತಿರುವ ಅಡೆ ತಡೆಗಳ ಬಗ್ಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ಡಬ್ಲ್ಯುಎಫ್‌ಐ ಚುನಾವಣೆಗೆ ನೀಡಿರುವ ತಡೆ ತೆರವುಗೊಳಿಸುವಂತೆ ಐಒಎ ನೇಮಿತ ತಾತ್ಕಾಲಿಕ ಸಮಿತಿಯು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಅಭಯ್‌ ಓಕಾ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ, ವಿಳಂಬದ ಬಗ್ಗೆ ನ.3ರ ಮೊದಲು ಉತ್ತರಿಸುವಂತೆ ಕೇಂದ್ರ ಸರ್ಕಾರ, ಹರ್ಯಾಣ ಕುಸ್ತಿ ಹಾಗೂ ಒಲಿಂಪಿಕ್‌ ಸಂಸ್ಥೆಗೆ ನೋಟಿಸ್‌ ನೀಡಿತು. ಈಗಾಗಲೇ ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ನಿಗದಿಯಾಗಿದ್ದ ಡಬ್ಲ್ಯುಎಫ್‌ಐ ಚುನಾವಣೆ 3 ಬಾರಿ ಮುಂದೂಡಿಕೆಯಾಗಿದೆ.

Latest Videos

undefined

ರಾಷ್ಟ್ರೀಯ ಅಥ್ಲೆಟಿಕ್ಸ್‌ ಕೂಟ: ರಾಜ್ಯದ ಆರ್ಯಾಗೆ ಕಂಚು

ಬೆಂಗಳೂರು: ಇಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಲಾಂಗ್‌ ಜಂಪ್‌ ಪಟು ಆರ್ಯಾ ಕಂಚಿನ ಪದಕ ಗೆದ್ದಿದ್ದಾರೆ. ಶುಕ್ರವಾರ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಆರ್ಯಾ 7.65 ಮೀ. ದೂರಕ್ಕೆ ಜಿಗಿದು 3ನೇ ಸ್ಥಾನಿಯಾದರು. ಇದೇ ವೇಳೆ ಪುರುಷರ ಜಾವೆಲಿನ್‌ನಲ್ಲಿ ರಾಜ್ಯದ ಡಿ.ಪಿ. ಮನು ಫೈನಲ್‌ಗೇರಿದ್ದಾರೆ. ಸರ್ವಿಸಸ್‌ ಪರ ಆಡುತ್ತಿರುವ ಅವರು ಅರ್ಹತಾ ಸುತ್ತಿನಲ್ಲಿ 80.67 ಮೀ. ದೂರ ಎಸೆದು ಮೊದಲ ಸ್ಥಾನ ಪಡೆದರು. ಇನ್ನು ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಸಿಂಚಲ್‌ 58.94 ಸೆಕೆಂಡ್‌ಗಳಲ್ಲಿ ಕ್ರಮಿಸಿ ಫೈನಲ್‌ ಪ್ರವೇಶಿಸಿದರು. ಅವರು ರೈಲ್ವೇಸ್‌ ತಂಡ ಪ್ರತಿನಿಧಿಸುತ್ತಿದ್ದಾರೆ.

ಮೋದಿ ಸ್ಟೇಡಿಯಂನಲ್ಲಿ ಇಂಡೋ-ಪಾಕ್ ಕದನ; ಮೈದಾನಕ್ಕೆ ಕಳೆ ಹೆಚ್ಚಿಸಿದ ತೆಂಡುಲ್ಕರ್-ಅನುಷ್ಕಾ ಎಂಟ್ರಿ..!

ನಾಳೆಯಿಂದ ಧಾರವಾಡದಲ್ಲಿ ಅಂ.ರಾ. ಟೆನಿಸ್ ಟೂರ್ನಿ

ಧಾರವಾಡ: ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌(ಐಟಿಎಫ್‌)ನ ವಿಶ್ವ ಟೆನಿಸ್‌ ಟೂರ್‌ ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ಅ. 15 ರಿಂದ 22ರವರೆಗೆ ನಡೆಯಲಿದೆ. 17 ವರ್ಷಗಳ ನಂತರ ನಗರದಲ್ಲಿ ಅಂ.ರಾ. ಟೂರ್ನಿ ನಡೆಯಲಿದ್ದು, 20 ರಾಷ್ಟ್ರಗಳ 44 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಏಷ್ಯನ್‌ ಗೇಮ್ಸ್‌ನ ಡಬಲ್ಸ್‌ನಲ್ಲಿ ಪದಕ ಗೆದ್ದ ರಾಮ್‌ಕುಮಾರ್‌, ದಿಗ್ವಿಜಯ್‌ ಸಿಂಗ್‌ ಸೇರಿ ಭಾರತದ 12 ಆಟಗಾರರು ಕಣಕ್ಕಿಳಿಯಲಿದ್ದಾರೆ.

ಮೆರ್ಡೆಕಾ ಕಪ್‌ ಫುಟ್ಬಾಲ್‌: ಭಾರತಕ್ಕೆ 2-4ರ ಸೋಲು

ಕೌಲಾಲಂಪುರ: ಮೆರ್ಡೆಕಾ ಕಪ್‌ ಫುಟ್ಬಾಲ್‌ ಟೂರ್ನಿಯಲ್ಲಿ ಭಾರತ ಸೋತು ಅಭಿಯಾನ ಕೊನೆಗೊಳಿಸಿದೆ. 3 ತಂಡಗಳು ಪಾಲ್ಗೊಂಡಿರುವ ಟೂರ್ನಿಯಲ್ಲಿ ಶುಕ್ರವಾರ ಭಾರತ ತಂಡ ಮಲೇಷ್ಯಾ ವಿರುದ್ಧ 2-4 ಗೋಲುಗಳಿಂದ ಪರಾಭವಗೊಂಡಿತು. ಇದರೊಂದಿಗೆ ಆತಿಥೇಯ ಮಲೇಷ್ಯಾ ಫೈನಲ್‌ಗೇರಿದ್ದು, ಅ.17ರಂದು ಪ್ರಶಸ್ತಿಗಾಗಿ ತಜಿಕಿಸ್ತಾನ ವಿರುದ್ಧ ಸೆಣಸಲಿದೆ. ಶುಕ್ರವಾರದ ನಾಕೌಟ್‌ ಪಂದ್ಯದಲ್ಲಿ ಭಾರತದ ಪರ ಮಹೇಶ್‌ ಸಿಂಗ್‌(13ನೇ ನಿಮಿಷ), ನಾಯಕ ಸುನಿಲ್‌ ಚೆಟ್ರಿ(51ನೇ ನಿಮಿಷ) ಗೋಲು ಬಾರಿಸಿದರು. ಇದು ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಚೆಟ್ರಿ ಹೊಡೆದ 93ನೇ ಗೋಲು. ಇದೇ ವೇಳೆ ಪಂದ್ಯದಲ್ಲಿ ಭಾರತ ಬಾರಿಸಿದ ಗೋಲೊಂದನ್ನು ರೆಫ್ರಿ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿದೆ.

click me!