
ಬೆಂಗಳೂರು(ಅ.14): ಇದೇ ತಿಂಗಳ ಅ. 20ರಿಂದ ಮಲೇಷ್ಯಾದಲ್ಲಿ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ಭಾರತೀಯ ಹಾಕಿ ತಂಡದಲ್ಲಿ ಮತ್ತೆರಡು ಬದಲಾವಣೆಗಳಾಗಿವೆ.
ಗಾಯದ ಸಮಸ್ಯೆಗೆ ತುತ್ತಾಗಿರುವ ತಂಡದ ಫಾರ್ವರ್ಡ್ ಆಟಗಾರ, ರಾಜ್ಯದ ಎಸ್.ವಿ. ಸುನಿಲ್ ಹಾಗೂ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಈ ಇಬ್ಬರ ಬದಲಿಗೆ ಕ್ರಮವಾಗಿ ರಮಣದೀಪ್ ಸಿಂಗ್ ಹಾಗೂ ಆಕಾಶ್‌ದೀಪ್ ಸಿಂಗ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆಂದು ತಂಡದ ಅಧಿಕೃತ ಪ್ರಕಟಣೆ ತಿಳಿಸಿದೆ.
ರಿಯೊ ಒಲಿಂಪಿಕ್ಸ್‌ನಲ್ಲಿ ಕೆನಡಾ ವಿರುದ್ಧದ ಪಂದ್ಯದಲ್ಲೇ ಸುನಿಲ್ ಅವರು ಮಣಿಕಟ್ಟು ನೋವಿಗೆ ತುತ್ತಾಗಿದ್ದರು. ಆಗಿನಿಂದಲೂ ಅವರು ಅದೇ ಬಾಧೆಯಲ್ಲಿದ್ದು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಇನ್ನು, ಮನ್‌ಪ್ರೀತ್ ಅವರು ತೊಡೆಸಂದು ಸೆಳೆತಕ್ಕೊಳಗಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ತಂಡವು ಮಲೇಷ್ಯಾಕ್ಕೆ ತೆರಳಿದರೂ, ಈ ಹಿಂದೆಯೇ ಗಾಯಾಳುವಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ರಾಜ್ಯದ ಮತ್ತೊಬ್ಬ ಆಟಗಾರ ರಘುನಾಥ್ ಹಾಗೂ ಈಗಷ್ಟೇ ತಂಡದಿಂದ ಹೊರಬಿದ್ದಿರುವ ಎಸ್.ವಿ. ಸುನಿಲ್ ಇಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿಯೇ ನೆಲೆಸಿ ತರಬೇತಿ ಮುಂದುವರಿಸಲಿದ್ದಾರೆಂದು ತಂಡದ ಪ್ರಧಾನ ಕೋಚ್ ರೋಲೆಂಟ್ ಓಲ್ಟ್‌ಮನ್ಸ್ ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.