ಡೆಲ್ಲಿ ಬ್ಯಾಟಿಂಗ್ Vs ಹೈದರಾಬಾದ್ ಬೌಲಿಂಗ್ ನಡುವೆ ಕಾದಾಟ

First Published May 10, 2018, 1:57 PM IST
Highlights

ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಡೆಲ್ಲಿ, 6 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ತಂಡ, ಪ್ಲೇ-ಆಫ್‌’ಗೇರಬೇಕಿದ್ದರೆ ಪವಾಡದ ಮೇಲೆ ಪವಾಡ ನಡೆಯಬೇಕು.

ನವದೆಹಲಿ[ಮೇ.10]: ಯುವ ಹಾಗೂ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದರೂ, ಡೆಲ್ಲಿ ಡೇರ್‌'ಡೆವಿಲ್ಸ್‌'ಗೆ ಈ ಬಾರಿಯೂ ಅದೃಷ್ಟ ಮಾತ್ರ ಕೈಹಿಡಿಯಲಿಲ್ಲ. ಗೌತಮ್ ಗಂಭೀರ್ ನೇತೃತ್ವದಲ್ಲೇ ಮುಕ್ಕಾಲು ಪಾಲು ಮುಳುಗಿದ್ದ ತಂಡವನ್ನು ಹೊಸ ನಾಯಕ ಶ್ರೇಯಸ್ ಅಯ್ಯರ್ ಮೇಲೆತ್ತುವ ಪ್ರಯತ್ನ ನಡೆಸಿದರಾದರೂ ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. 
ಇಂದು ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಲಿಷ್ಠ ಸನ್‌’ರೈಸರ್ಸ್‌ ಹೈದರಾಬಾದ್ ಸವಾಲು ಎದುರಾಗಲಿದ್ದು, ಪಂದ್ಯ ಕೆಲ ವಿಚಾರಗಳಿಂದ ಮಹತ್ವ ಪಡೆದುಕೊಂಡಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಡೆಲ್ಲಿ, 6 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ತಂಡ, ಪ್ಲೇ-ಆಫ್‌’ಗೇರಬೇಕಿದ್ದರೆ ಪವಾಡದ ಮೇಲೆ ಪವಾಡ ನಡೆಯಬೇಕು. ಇನ್ನುಳಿದ 4 ಲೀಗ್ ಪಂದ್ಯಗಳಲ್ಲಿ ಗೆಲ್ಲುವುದು ಮಾತ್ರವಲ್ಲದೆ, ಇತರ ಪಂದ್ಯಗಳ ಫಲಿತಾಂಶವೂ ನೆರವಾಗಬೇಕು. ಆರ್’ಸಿಬಿಯಂತೆ ಡೆಲ್ಲಿ ಪಾಲಿಗೂ ಪ್ಲೇ-ಆಫ್ ಬಾಗಿಲು ಬಹುತೇಕ ಮುಚ್ಚಿದ ಹಾಗೆಯೇ.
ಮತ್ತೊಂದೆಡೆ 8 ಜಯದೊಂದಿಗೆ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸನ್‌’ರೈಸರ್ಸ್‌, ಇನ್ನುಳಿದ 4 ಪಂದ್ಯಗಳಲ್ಲೂ ಗೆದ್ದು ಒಟ್ಟು ಅಂಕವನ್ನು 24ಕ್ಕೆ ಏರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದು ಪ್ಲೇ-ಆಫ್‌’ಗೇರಿದರೆ, ಫೈನಲ್‌ಗೇರಲು ಒಂದು ಹೆಚ್ಚುವರಿ ಅವಕಾಶ ದೊರೆಯಲಿದೆ. ಹೀಗಾಗಿ ಸನ್‌’ರೈಸರ್ಸ್‌ ಜಯದ ಲಯ ಉಳಿಸಿಕೊಳ್ಳಲು ಕಾತರಿಸುತ್ತಿದೆ.
ರೈಸರ್ಸ್‌ ಬೌಲಿಂಗ್ / ಡೆಲ್ಲಿ ಬ್ಯಾಟಿಂಗ್:
ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ತಂಡ ಸನ್‌ರೈಸರ್ಸ್‌. ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಶಭ್ ಪಂತ್‌’ರಂತಹ ಭಾರತ ಕ್ರಿಕೆಟ್ ತಂಡದ ಮುಂದಿನ ಪೀಳಿಗೆಯ ಬ್ಯಾಟ್ಸ್‌ಮನ್‌’ಗಳ ಬಲ ಡೆಲ್ಲಿಗಿದೆ. ಸನ್‌’ರೈಸರ್ಸ್‌ ಬೌಲಿಂಗ್ ಹಾಗೂ ಡೆಲ್ಲಿಯ ಯುವ ಬ್ಯಾಟ್ಸ್‌’ಮನ್‌’ಗಳ ನಡುವಿನ ಪೈಪೋಟಿ ಭಾರೀ ಕುತೂಹಲ ಹುಟ್ಟಿಸಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದ ಖುಷಿಯಲ್ಲಿರುವ ಪೃಥ್ವಿ ಹಾಗೂ ಶ್ರೇಯಸ್, ಆಕರ್ಷಕ ಫಾರ್ಮ್ ಮುಂದುವರಿಸಲು ಉತ್ಸುಕರಾಗಿದ್ದಾರೆ. 
ಡೆಲ್ಲಿ ಬೌಲಿಂಗ್ ಸಮಸ್ಯೆ ಎದುರಿಸುತ್ತಿ ದ್ದರೆ, ಸನ್‌ರೈಸರ್ಸ್‌ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಣುತ್ತಿಲ್ಲ. ಪ್ಲೇ-ಆಫ್ ಹತ್ತಿರವಾಗುತ್ತಿರುವಂತೆ ಸನ್‌ರೈಸರ್ಸ್‌, ತನ್ನ ಬ್ಯಾಟಿಂಗ್ ವಿಭಾಗವನ್ನೂ ಬೌಲಿಂಗ್‌ನಷ್ಟೇ ಬಲಿಷ್ಠಗೊಳಿಸಿಕೊಳ್ಳಲು ಎದುರು ನೋಡುತ್ತಿದೆ.

click me!