ಅಂತೂ ಬಂತು ಕಂಠೀರವಕ್ಕೆ ಸಿಂಥೆಟಿಕ್ ಟ್ರ್ಯಾಕ್!| ಮೂರು ದೇಶಗಳಿಂದ ಟ್ರ್ಯಾಕ್ ಸಾಮಾಗ್ರಿ ಆಮದು| ಮಳೆಗಾಲ ಮುಗಿದ ಬಳಿಕ ಅಳವಡಿಕೆ ಕಾರ್ಯ ಆರಂಭ
ಧನಂಜಯ ಎಸ್.ಹಕಾರಿ
ಬೆಂಗಳೂರು(ಸೆ.05): ವರ್ಷಕ್ಕೂ ಹೆಚ್ಚು ಸಮಯದಿಂದ ಬಾಕಿ ಇದ್ದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಕೊನೆಗೂ ಆರಂಭಗೊಳ್ಳುವ ಸಮಯ ಬಂದಿದೆ. 3 ದೇಶಗಳಿಂದ ಆಮದು ಮಾಡಿಕೊಂಡ ಟ್ರಾಕ್ ಸಾಮಾಗ್ರಿಗಳು ಶುಕ್ರವಾರ ಕ್ರೀಡಾಂಗಣ ತಲುಪಿದ್ದು, ಮಳೆಗಾಲ ಮುಗಿದ ಕೂಡಲೇ ಟ್ರ್ಯಾಕ್ ಅಳವಡಿಕೆ ಕಾರ್ಯ ಶುರುವಾಗಲಿದೆ.
ಕಂಠೀರವ ಟ್ರ್ಯಾಕ್ ಗುಂಡಿ ಬಿದ್ದಿದೆ ಎಂದು ‘ಕನ್ನಡಪ್ರಭ’ 2019ರ ಮೇ ತಿಂಗಳಲ್ಲಿ ಸರಣಿ ವರದಿ ಪ್ರಕಟಿಸಿ ಕ್ರೀಡಾ ಇಲಾಖೆಯನ್ನು ಎಚ್ಚರಿಸಿತ್ತು. ಅಥ್ಲೀಟ್‌ಗಳು ಗುಂಡಿ ಬಿದ್ದ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಆಗಿನ ಸರ್ಕಾರದ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, 6 ತಿಂಗಳಲ್ಲಿ ಹೊಸ ಟ್ರ್ಯಾಕ್ ಅಳವಡಿಸುವಂತೆ ಸೂಚಿಸಿತ್ತು. ಆದರೆ ಮಳೆ, ಕೊರೋನಾ ಲಾಕ್‌ಡೌನ್‌ನಿಂದಾಗಿ ಕಾಮಗಾರಿ ಆರಂಭಗೊಂಡಿರಲಿಲ್ಲ. ಇದೀಗ ಕಂಠೀರವದಲ್ಲಿ ಹೊಸ ಟ್ರ್ಯಾಕ್ ಅಳವಡಿಕೆ ಆಗಲಿದೆ ಎನ್ನುವುದು ಖಚಿತವಾದಂತಾಗಿದೆ.
ಅಂ.ರಾ. ಗುಣಮಟ್ಟದ ಟ್ರ್ಯಾಕ್:
ಕ್ರೀಡಾಂಗಣಕ್ಕೆ ತರಿಸಿರುವ ಟ್ರ್ಯಾಕ್ ಸಾಮಾಗ್ರಿಗಳನ್ನು 3 ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಅಮೆರಿಕ, ಆಸ್ಪ್ರೇಲಿಯಾ ಹಾಗೂ ಮಲೇಷ್ಯಾದಿಂದ ಸಾಮಾಗ್ರಿ ತರಿಸಲಾಗಿದೆ ಎಂದು ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಡ್ವಾನ್ಸಡ್ ಪಾಲಿಮರ್ ಟೆಕ್ನಾಲಜಿ ಕಂಪೆನಿಯ, ರೆಕಾರ್ಟನ್ ಟ್ರ್ಯಾಕ್ ಸಾಮಾಗ್ರಿ ಉತ್ತಮ ಗುಣಮಟ್ಟದ್ದು ಎಂದು ಅಂ.ರಾ. ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆ (ಐಎಎಎಫ್) ಒಪ್ಪಿಕೊಂಡಿದೆ.
ರೆಕಾರ್ಟನ್ ಟ್ರ್ಯಾಕ್ ಎಲ್ಲಿ ಬಳಕೆ:
ಉತ್ಕೃಷ್ಟಗುಣಮಟ್ಟಹೊಂದಿರುವ ರೆಕಾರ್ಟನ್ ಟ್ರ್ಯಾಕ್ ಸಾಮಾಗ್ರಿಗೆ ವಿದೇಶದಲ್ಲೂ ಭಾರೀ ಬೇಡಿಕೆಯಿದೆ. ದೇಶದಲ್ಲಿಯೂ ಈ ಸಾಮಾಗ್ರಿಯನ್ನು ಬಳಸಿ ಟ್ರ್ಯಾಕ್ ನಿರ್ಮಿಸಲಾಗಿದೆ. 2015ರಲ್ಲಿ ಜೆಮ್ಶೆಡ್‌ಪುರದ ಜೆಆರ್‌ಡಿ ಟಾಟಾ ಸ್ಪೋಟ್ಸ್‌ರ್ ಕಾಂಪ್ಲೆಕ್ಸ್‌ನ ಅಥ್ಲೆಟಿಕ್ಸ್ ಸಿಂಥೆಟಿಕ್ ಟ್ರ್ಯಾಕ್‌ಗೆ ಈ ಸಾಮಾಗ್ರಿ ಬಳಸಲಾಗಿದೆ. ಗುಜರಾತ್‌ನ ಗೋದ್ರಾ ಕ್ರೀಡಾ ಸಂಕೀರ್ಣದಲ್ಲಿ ಇದೇ ಸಾಮಾಗ್ರಿ ಬಳಸಿ ಟ್ರ್ಯಾಕ್ ನಿರ್ಮಿಸಲಾಗಿದೆ. 2016ರಲ್ಲಿ ಲಖನೌನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ಅಥ್ಲೆಟಿಕ್ಸ್ ಟ್ರ್ಯಾಕ್‌ಗೆ ಈ ಸಾಮಾಗ್ರಿ ಬಳಸಿಕೊಳ್ಳಲಾಗಿದೆ. ಮಣಿಪುರದ ಇಂಪಾಲಾದಲ್ಲಿನ ಸಾಯ್ ಎನ್‌ಇಆರ್‌ಸಿ ಕ್ರೀಡಾಂಗಣದಲ್ಲೂ ಈ ಸಾಮಾಗ್ರಿ ಬಳಸಿಕೊಂಡು ಸಿಂಥೆಟಿಕ್ ಟ್ರ್ಯಾಕ್ ಹಾಕಲಾಗಿದೆ.
ಮುಂಗಡ ಹಣ ನೀಡಿಲ್ಲ:
ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಮರು ಅಳವಡಿಕೆ ಕಾರ‍್ಯಕ್ಕೆ ರಾಜ್ಯ ಸರ್ಕಾರ ನಾಲ್ಕುವರೆ ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಹಣಕಾಸು ಇಲಾಖೆ (ಎಫ್‌ಡಿ) ಮುಂಗಡ ಹಣ ನೀಡದೆ ಇರುವುದು ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಈಗಲೂ ಇಲಾಖೆ ಟ್ರ್ಯಾಕ್ ಸಾಮಾಗ್ರಿಯನ್ನು ವಿದೇಶದಿಂದ ತರಿಸಲು ಮುಂಗಡವಾಗಿ ಹಣ ನೀಡಿಲ್ಲ. ಸಾಮಾಗ್ರಿ ಕ್ರೀಡಾಂಗಣಕ್ಕೆ ಬಂದ ಮೇಲೆ ಅದನ್ನು ಪರಿಶೀಲಿಸಿ ಹಣ ನೀಡುವುದಾಗಿ ಇಲಾಖೆ ತಿಳಿಸಿತ್ತು. ಟ್ರ್ಯಾಕ್ ಸಾಮಾಗ್ರಿ ಆಮದು ವಿಳಂಬವಾಗಲು ಇದೂ ಕಾರಣ ಎಂದು ಕ್ರೀಡಾ ಇಲಾಖೆಯ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.