ನಾವೆಲ್ಲರೂ 2023ರ ಅಂತಿಮಘಟ್ಟದಲ್ಲಿದ್ದು, ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ನಾವಿಂದು 2023ರ ಮಾರ್ಚ್ ತಿಂಗಳಿನಲ್ಲಿ ನಡೆದ ಪ್ರಮುಖ ಕ್ರೀಡಾಚಟುವಟಿಕೆಗಳನ್ನು ನೋಡೋಣ ಬನ್ನಿ
ಬೆಂಗಳೂರು: ನಾವೆಲ್ಲರೂ 2023ರ ಅಂತಿಮಘಟ್ಟದಲ್ಲಿದ್ದು, ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ನಾವಿಂದು 2023ರ ಮಾರ್ಚ್ ತಿಂಗಳಿನಲ್ಲಿ ನಡೆದ ಪ್ರಮುಖ ಕ್ರೀಡಾಚಟುವಟಿಕೆಗಳನ್ನು ನೋಡೋಣ ಬನ್ನಿ
ಇಂದೋರ್ ಟೆಸ್ಟ್‌ನಲ್ಲಿ ಸೋಲುಂಡ ಭಾರತ
undefined
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಇಂದೋರ್ ಆತಿಥ್ಯ ವಹಿಸಿತ್ತು. ಮೊದಲೆರಡು ಟೆಸ್ಟ್ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಟೀಂ ಇಂಡಿಯಾಗೆ ಶಾಕ್ ನೀಡುವಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಯಶಸ್ವಿಯಾಯಿತು. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಕಾಂಗರೂ ಪಡೆಯನ್ನು ಮುನ್ನಡೆಸಿದ ಸ್ಮಿತ್, ಆತಿಥೇಯ ಭಾರತ ಎದುರು 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು.
ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ಚಾಲನೆ:
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ಮಾರ್ಚ್ ಮೊದಲ ವಾರ ಮುಂಬೈನಲ್ಲಿ ಅಧಿಕೃತ ಚಾಲನೆ ಸಿಕ್ಕಿತು. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿತು. 23 ದಿನಗಳ ಕಾಲ ನಡೆದ ಟೂರ್ನಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಚಾಂಪಿಯನ್ ಆಗಿ ಹೊರಹೊಮ್ಮಿತು.
Santosh Trophy: 54 ವರ್ಷಗಳ ಬಳಿಕ ಕರ್ನಾಟಕ ಫುಟ್ಬಾಲ್ ಚಾಂಪಿಯನ್..!
76ನೇ ಆವೃತ್ತಿಯ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಶನಿವಾರ ಮೇಘಾಲಯ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ಸಾಧಿಸಿದ ಕರ್ನಾಟಕ ಫುಟ್ಬಾಲ್ ತಂಡವು ಬರೋಬ್ಬರಿ 54 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕರ್ನಾಟಕಕ್ಕೆ ಇದು ಒಟ್ಟಾರೆ 5ನೇ ಟ್ರೋಫಿ. ಈ ಹಿಂದೆ ಮೈಸೂರು ಸಂಸ್ಥಾನವಿದ್ದಾಗ ರಾಜ್ಯ 4 ಬಾರಿ ಟ್ರೋಫಿ ಎತ್ತಿಹಿಡಿದಿತ್ತು.
ಅಹಮದಾಬಾದ್ ಟೆಸ್ಟ್: 2019ರ ಬಳಿಕ ಮೊದಲ ಟೆಸ್ಟ್ ಶತಕ ಸಿಡಿಸಿದ ಕೊಹ್ಲಿ
ಟೀಂ ಇಂಡಿಯಾ ರನ್ ಮಷೀನ್ 2019ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದರು. ಇದಾದ ಬಳಿಕ ಕಳೆದ ಮೂರುವರೆ ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಲು ವಿಫಲವಾಗುತ್ತಿದ್ದರು. ಆದರೆ ಆಸ್ಟ್ರೇಲಿಯಾ ಎದುರಿನ ಅಹಮದಾಬಾದ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಸಮಯೋಚಿತ ಶತಕ ಸಿಡಿಸಿ ಮಿಂಚಿದರು. ಇದರ ಹೊರತಾಗಿಯೂ ಕೊನೆಯ ಟೆಸ್ಟ್ ಡ್ರಾನಲ್ಲಿ ಅಂತ್ಯವಾಯಿತು. ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿತು.
Indian Super League ಶೂಟೌಟ್‌ನಲ್ಲಿ ಕಪ್ ಕೈಚೆಲ್ಲಿದ ಬಿಎಫ್‌ಸಿ..!
2022-23ರ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿ ಎಟಿಕೆ ಮೋಹನ್ ಬಗಾನ್ ತಂಡ ಹೊರಹೊಮ್ಮಿತು. ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಗೆದ್ದ ಎಟಿಕೆ, 4ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು.
ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟು, ಲೀಗ್‌ನಲ್ಲೇ ಹೊರಬೀಳುವ ಸ್ಥಿತಿ ತಲುಪಿದ್ದ ಬಿಎಫ್‌ಸಿ, 2023ರಲ್ಲಿ ಭರ್ಜರಿಯಾಗಿ ಪುಟಿದೆದ್ದು ತಾನಾಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ಗೇರಿತ್ತು. ಆದರೆ ಫೈನಲ್‌ನಲ್ಲಿ ತಂಡಕ್ಕೆ ಅದೃಷ್ಟ ಕೈಹಿಡಿಯಲಿಲ್ಲ.
ATP Rankings : 18 ವರ್ಷಗಳ ಬಳಿಕ ಟಾಪ್-10ನಿಂದ ರಾಫೆಲ್ ನಡಾಲ್ ಔಟ್..!
22 ಗ್ರ್ಯಾನ್ ಸ್ಲಾಂಗಳ ಒಡೆಯ, ಸ್ಪೇನ್‌ನ ರಾಫೆಲ್ ನಡಾಲ್ 2005ರ ಬಳಿಕ ಮೊದಲ ಬಾರಿಗೆ ಟೆನಿಸ್ ವಿಶ್ವ ರ‍್ಯಾಂಕಿಂಗ್ ಪಟ್ಟಿಯ ಅಗ್ರ-10ರಿಂದ ಹೊರಬಿದ್ದರು. ಸೋಮವಾರ ಪ್ರಕಟಗೊಂಡ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯಲ್ಲಿ ರಾಫೆಲ್ ನಡಾಲ್ 13ನೇ ಸ್ಥಾನಕ್ಕೆ ಕುಸಿದಿದ್ದರು. 2005ರ ಏಪ್ರಿಲ್ 25ರಿಂದ 2023ರ ಮಾರ್ಚ್ 20ರ ವರೆಗೂ ಸತತ 934 ವಾರಗಳ ಕಾಲ ನಡಾಲ್ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಅತಿಹೆಚ್ಚು ಸಮಯ ಅಗ್ರ-10ರಲ್ಲಿ ಸ್ಥಾನ ಉಳಿಸಿಕೊಂಡ ಪುರುಷ ಟೆನಿಸಿಗ ಎನ್ನುವ ದಾಖಲೆ ನಡಾಲ್ ಹೆಸರಿನಲ್ಲಿದೆ.
16ನೇ ಆವೃತ್ತಿಯ ಐಪಿಎಲ್‌ಗೆ ಚಾಲನೆ:
16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮಾರ್ಚ್ 31ರಂದು ಅಧಿಕೃತ ಚಾಲನೆ ಸಿಕ್ಕಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು 5 ವಿಕೆಟ್ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು.