
ಇಫೋ(ಮಲೇಷ್ಯಾ): 6ನೇ ಬಾರಿಗೆ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಭಾರತ ತಂಡದ ಕನಸು ಭಗ್ನಗೊಂಡಿದೆ. ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಕೊರಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 2-4 ಗೋಲುಗಳಿಂದ ಸೋಲುಂಡು ಆಘಾತ ಅನುಭವಿಸಿತು.
60 ನಿಮಿಷಗಳ ಪೂರ್ಣಾವಧಿ ಆಟದ ಮುಕ್ತಾಯಕ್ಕೆ ಉಭಯ ತಂಡಗಳಿ 1-1 ಗೋಲಿನಿಂದ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಭಾರತ ಕೇವಲ 2 ಗೋಲು ಬಾರಿಸಿದರೆ, 4 ಬಾರಿ ಭಾರತೀಯ ಗೋಲ್ ಕೀಪರ್‌ನನ್ನು ವಂಚಿಸುವಲ್ಲಿ ಯಶಸ್ವಿಯಾದ ಕೊರಿಯಾ 3ನೇ ಬಾರಿ ಪ್ರಶಸ್ತಿ ಜಯಿಸಿತು. ಶೂಟೌಟ್‌ನಲ್ಲಿ ಭಾರತ ಪರ ಬೀರೇಂದ್ರ ಲಾಕ್ರಾ ಹಾಗೂ ವರುಣ್ ಕುಮಾರ್ ಗೋಲು ಬಾರಿಸಿದರೆ, ಮನ್‌ದೀಪ್, ಸುಮಿತ್ ಕುಮಾರ್ ಹಾಗೂ ಸುಮಿತ್ ಚೆಂಡನ್ನು ಗೋಲು ಪೆಟ್ಟಿಗೆಗೆ ತಲುಪಿಸುವಲ್ಲಿ ವಿಫಲರಾದರು. ಶೂಟೌಟ್‌ನಲ್ಲಿ ಅನುಭವಿ ಶ್ರೀಜಿತ್ ಬದಲು ಯುವ ಕೃಷನ್ ಪಾಠಕ್ ಗೋಲು ಕೀಪಿಂಗ್ ಮಾಡಿದ್ದು ಭಾರತಕ್ಕೆ ದುಬಾರಿಯಾಯಿತು.
ಸಿಮ್ರನ್‌ಜೀತ್ 9ನೇ ನಿಮಿಷದಲ್ಲೇ ಗೋಲು ಬಾರಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 1-0ಯಿಂದ ಮುಂದಿದ್ದ ಭಾರತ, 47ನೇ ನಿಮಿಷದಲ್ಲಿ ಕೊರಿಯಾಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ನೀಡಿತು. ಇದರ ಲಾಭವೆತ್ತಿದ ಕೊರಿಯಾ ಸಮಬಲ ಸಾಧಿಸಿ, ಪಂದ್ಯ ಪೆನಾಲ್ಟಿಶೂಟೌಟ್‌ಗೆ ಹೋಗುವಂತೆ ಮಾಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.