2019ರ ಐಪಿಎಲ್ ಮತ್ತೊಮ್ಮೆ ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್..? ಯಾಕೆ ಗೊತ್ತಾ..?

By Suvarna Web DeskFirst Published Jan 9, 2018, 10:47 AM IST
Highlights

2009ರಲ್ಲಿ ಲೋಕಸಭೆ ಚುನಾವಣೆ ಸಮೀಪಿಸಿದ ಕಾರಣ, ಆಟಗಾರರಿಗೆ ಸೂಕ್ತ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಿದ್ದ ಬಿಸಿಸಿಐ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿತ್ತು.

ಮುಂಬೈ(ಜ.09): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 2019ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದಕ್ಷಿಣ ಆಫ್ರಿಕಾಕಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಹಾಗೂ ಐಪಿಎಲ್ ಟೂರ್ನಿ ಏಕಕಾಲಕ್ಕೆ ಆಯೋಜನೆಗೊಳ್ಳುವ ಸಾಧ್ಯತೆ ಇದ್ದು, ಭದ್ರತೆ ದೃಷ್ಟಿಯಿಂದ ಪಂದ್ಯಾವಳಿಯನ್ನು ಸ್ಥಳಾಂತರಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.

2009ರಲ್ಲಿ ಆಫ್ರಿಕಾ ಆತಿಥ್ಯ: 2009ರಲ್ಲಿ ಲೋಕಸಭೆ ಚುನಾವಣೆ ಸಮೀಪಿಸಿದ ಕಾರಣ, ಆಟಗಾರರಿಗೆ ಸೂಕ್ತ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಿದ್ದ ಬಿಸಿಸಿಐ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿತ್ತು. ತವರಿನಾಚೆ ನಡೆದ ಪಂದ್ಯಾವಳಿ ತವರಿನ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದರೂ, ನಿರೀಕ್ಷಿತ ಯಶಸ್ಸು ಕಂಡಿತ್ತು. ದಕ್ಷಿಣ ಆಫ್ರಿಕಾದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಗೂ ಒಳ್ಳೆಯ ಆದಾಯ ತಂದು ಕೊಟ್ಟಿತ್ತು. ಡೆಕ್ಕನ್ ಚಾರ್ಜರ್ಸ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

Latest Videos

2014ರಲ್ಲಿ ಯುಎಇನಲ್ಲಿ ಮೊದಲ ಹಂತ: 2014ರ ಆವೃತ್ತಿಯಲ್ಲೂ ಇದೇ ಸಮಸ್ಯೆ ಎದುರಾದ ಕಾರಣ, 2 ವಾರಗಳ ಕಾಲ ಪಂದ್ಯಗಳನ್ನು ಯುಎಇನಲ್ಲಿ ನಡೆಸಲಾಯಿತು. ಬಳಿಕ ಪಂದ್ಯಾವಳಿ ಭಾರತದಲ್ಲಿ ಮುಂದುವರಿದಿತ್ತು.

ಮತ್ತೆ ಅದೇ ಸಮಸ್ಯೆ: ಇದೀಗ ಮುಂದಿನ ವರ್ಷ ನಡೆಯಬೇಕಾಗಿರುವ 12ನೇ ಆವೃತ್ತಿಗೂ ಇದೇ ಸಮಸ್ಯೆ ಎಡತಾಕುವ ನಿರೀಕ್ಷೆಯಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂದಿನ ವರ್ಷದ ಐಪಿಎಲ್ ಅನ್ನು ಸ್ಥಳಾಂತರಿಸುವ ಕುರಿತು, ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆ ಜತೆ ಬಿಸಿಸಿಐ ಮೊದಲ ಹಂತದ ಚರ್ಚೆ ನಡೆಸಿದ್ದು, ಆಫ್ರಿಕಾ ಸಹ ಆಸಕ್ತಿ ವಹಿಸಿದೆ ಎನ್ನಲಾಗಿದೆ. ಒಂದೊಮ್ಮೆ 12ನೇ ಆವೃತ್ತಿ ಐಪಿಎಲ್ ಟೂರ್ನಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರ ಗೊಂಡರೆ ಭಾರತದ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಉಂಟಾಗುವುದರಲ್ಲಿ ಎರಡು ಮಾತಿಲ್ಲ.

click me!