ಕಾಂಗರೂಗಳಿಗೆ ತಿರುಗೇಟು ನೀಡಿದ ಹರಿಣಗಳು

By Suvarna Web DeskFirst Published Nov 4, 2016, 12:45 PM IST
Highlights

ದ್ವಿತೀಯ ಇನಿಂಗ್ಸ್ ಆರಂಭಿಸಿರುವ ದ.ಆಫ್ರಿಕಾ ದಿನಾಂತ್ಯಕ್ಕೆ 2 ವಿಕೆಟ್‌ಗೆ 104ರನ್‌ಗಳಿಸಿದ್ದು 102ರನ್‌ಗಳ ಮುನ್ನಡೆ ಪಡೆದಿದೆ. ಆರಂಭಿಕ ಡೀನ್ ಎಲ್ಗರ್ (46) ಮತ್ತು ಮಧ್ಯಮ ಕ್ರಮಾಂಕದಲ್ಲಿ ಜೀನ್ ಪಾಲ್ ಡುಮಿನಿ (34)ರನ್‌ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಪರ್ತ್(ನ.04): ಭಾರತೀಯ ಮೂಲದ ಕೇಶವ್ ಮಹಾರಾಜ್ (56ಕ್ಕೆ3) ಮತ್ತು ವೆರ್ನಾನ್ ಫಿಲಾಂಡರ್ (56ಕ್ಕೆ4) ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.

ಇಲ್ಲಿನ ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಇಂದು ವಿಕೆಟ್ ನಷ್ಟವಿಲ್ಲದೇ 105ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ ತಂಡ 244ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, ಕೇವಲ 2 ರನ್‌ಗಳ ಮುನ್ನಡೆ ಸಾಧಿಸಿತು. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ದ.ಆಫ್ರಿಕಾ ದಿನಾಂತ್ಯಕ್ಕೆ 2 ವಿಕೆಟ್‌ಗೆ 104ರನ್‌ಗಳಿಸಿದ್ದು 102ರನ್‌ಗಳ ಮುನ್ನಡೆ ಪಡೆದಿದೆ. ಆರಂಭಿಕ ಡೀನ್ ಎಲ್ಗರ್ (46) ಮತ್ತು ಮಧ್ಯಮ ಕ್ರಮಾಂಕದಲ್ಲಿ ಜೀನ್ ಪಾಲ್ ಡುಮಿನಿ (34)ರನ್‌ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಎರಡು ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ದ.ಆಫ್ರಿಕಾ ಆರಂಭದಲ್ಲಿ ಸ್ಟೀನ್ ಕಾಕ್ (12) ಅವರನ್ನು ಬೇಗನೆ ಕಳೆದುಕೊಂಡಿತು. ಹಶೀಂ ಆಮ್ಲಾ (1) ಕೂಡ ಬಂದಷ್ಟೇ ವೇಗವಾಗಿ ನಿರ್ಗಮಿಸಿದರು. 10ರನ್‌ಗಳ ಅಂತರದಲ್ಲಿ ಎರಡು ವಿಕೆಟ್ ಬಿದ್ದಿದ್ದರಿಂದ ಪ್ರವಾಸಿ ದ.ಆಫ್ರಿಕಾ ತಂಡ ಆಘಾತ ಅನುಭವಿಸಿತು. ನಂತರ ಜೊತೆಯಾದ ಎಲ್ಗರ್ ಮತ್ತು ಡುಮಿನಿ ನಿಧಾನಗತಿಯ ಬ್ಯಾಟಿಂಗ್‌ನಿಂದ ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.

Latest Videos

ಇದಕ್ಕೂ ಮುನ್ನ ಮೊದಲ ಇನಿಂಗ್ಸ್ ಮುಂದುವರೆಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ಉತ್ತಮವಾಗಿ ರನ್ ಸೇರಿಸುತ್ತಾ ಸಾಗಿತು. ಗುರುವಾರ ವಿಕೆಟ್ ನಷ್ಟವಿಲ್ಲದೇ ಶತಕದ ಜೊತೆಯಾಟವಾಡಿದ್ದ ಆರಂಭಿಕರಾದ ವಾರ್ನರ್ ಮತ್ತು ಶಾನ್ ಮಾರ್ಶ್ ಜೋಡಿ ಮೊದಲ ವಿಕೆಟ್‌ಗೆ 158ರನ್ ಸೇರಿಸಿತು. ವಾರ್ನರ್ (97; 100 ಎಸೆತ, 16 ಬೌಂಡರಿ, 1 ಸಿಕ್ಸರ್) ಕೇವಲ 3 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. ನಂತರ ಬಂದ ಉಸ್ಮಾನ್ ಕ್ವಾಜಾ (4), ನಾಯಕ ಸ್ಟೀವನ್ ಸ್ಮಿತ್ (0), ಶಾನ್ ಮಾರ್ಶ್ (63), ಮಿಚೆಲ್ ಮಾರ್ಶ್ (0) ಶೂನ್ಯಕ್ಕೆ ಔಟ್ ಆದರು. 23ರನ್‌ಗಳ ಅಂತರದಲ್ಲಿ 4 ವಿಕೆಟ್ ಉರುಳಿದ್ದು ಆಸೀಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ಈ ವೇಳೆ ಆ್ಯಡಮ್ ವೋಜಸ್ (27) ಮತ್ತು ಪೀಟರ್ ನೆವಿಲ್ (23) ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯಲ್ಲಿ ಪೀಟರ್ ಸೀಡಲ್ ಅಜೇಯ 18 ರನ್‌ಗಳಿಸಿದ್ದು, ಆಸೀಸ್‌ನ ಅತ್ಯಲ್ಪ ಮುನ್ನಡೆಗೆ ಕಾರಣವಾಯಿತು. ದ.ಆಫ್ರಿಕಾ ಪರ ಫಿಲಾಂಡರ್ 4, ಕೇಶವ್ 3, ರಬಾಡ 2 ವಿಕೆಟ್ ಪಡೆದರು.

ಮಿಂಚಿದ ಕೇಶವ್

ಭಾರತೀಯ ಮೂಲದ ಸ್ಪಿನ್ನರ್ ಕೇಶವ್ ಆತ್ಮನಂದಾ ಮಹಾರಾಜ್, ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಾಯಕ ಆಸೀಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರ ವಿಕೆಟ್ ಪಡೆಯುವ ಮೂಲಕ ಕೇಶವ್, ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಖಾತೆ ತೆರೆದರು. ಕೇಶವ್ 18.2 ಓವರ್‌ಗಳಲ್ಲಿ 5 ಮೇಡನ್ 56ರನ್ ನೀಡಿ 3 ವಿಕೆಟ್ ಪಡೆದರು. ಕೇಶವ್ ಸ್ಪಿನ್ ಮೋಡಿಗೆ ಸ್ಟೀವನ್ ಸ್ಮಿತ್, ಪೀಟರ್ ನೆವಿಲ್ ಮತ್ತು ಮಿಚೆಲ್ ಸ್ಟಾರ್ಕ್ ತಲೆದೂಗಿದರು.

ಸಂಕ್ಷಿಪ್ತ ಸ್ಕೋರ್

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 242

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 70.2 ಓವರ್‌ಗಳಲ್ಲಿ 244

(ವಾರ್ನರ್ 97, ಮಾರ್ಶ್ 63, ಫಿಲಾಂಡರ್ 56ಕ್ಕೆ4)

ದಕ್ಷಿಣ ಆಫ್ರಿಕಾ ದ್ವಿತೀಯ ಇನಿಂಗ್ಸ್ 40 ಓವರ್‌ಗಳಲ್ಲಿ 2 ವಿಕೆಟ್‌ಗೆ 104

(ಎಲ್ಗರ್ ಬ್ಯಾಟಿಂಗ್ 46, ಡುಮಿನಿ ಬ್ಯಾಟಿಂಗ್ 34, ಸಿಡಲ್ 12ಕ್ಕೆ1)

click me!