ಫೈನಲ್'ಗೆ ಸಿಂಧು, ಸಮೀರ್

By Suvarna Web DeskFirst Published Nov 26, 2016, 2:58 PM IST
Highlights

ಅಚ್ಚರಿಯುತ ಜಯ ಸಾಧಿಸಿದ ಭಾರತದ ಸಮೀರ್ ವರ್ಮಾ ಪ್ರಶಸ್ತಿ ಸುತ್ತಿಗೆ ಧಾವಿಸಿದರೆ, ಇತ್ತ ಜಯದ ಅಭಿಯಾನ ಮುಂದುವರೆಸಿರುವ ಪಿ.ವಿ. ಸಿಂಧು ಕೂಡ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದಾರೆ.

ಹಾಂಕಾಂಗ್(ನ.26): ವಿಶ್ವದ ಮೂರನೇ ಶ್ರೇಯಾಂಕಿತ ಹಾಗೂ ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚೀನಾ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದ ಇಂಡೋನೇಷಿಯಾದ ಜಾನ್ ಒ ಜೊರ್ಗೆನ್‌'ಸನ್ ವಿರುದ್ಧ ಅಚ್ಚರಿಯುತ ಜಯ ಸಾಧಿಸಿದ ಭಾರತದ ಸಮೀರ್ ವರ್ಮಾ ಪ್ರಶಸ್ತಿ ಸುತ್ತಿಗೆ ಧಾವಿಸಿದರೆ, ಇತ್ತ ಜಯದ ಅಭಿಯಾನ ಮುಂದುವರೆಸಿರುವ ಪಿ.ವಿ. ಸಿಂಧು ಕೂಡ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದಾರೆ.

ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರನ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಿದ ಸಮೀರ್, 21-19, 24-22ರ ಎರಡು ನೇರ ಗೇಮ್‌'ಗಳಲ್ಲಿ ಜಯ ಪಡೆದರು. ತೀವ್ರ ಕುತೂಹಲ ಕೆರಳಿಸಿದ್ದ ಎರಡನೇ ಗೇಮ್‌'ನಲ್ಲಂತೂ ಜೊರ್ಗೆನ್‌'ಸನ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ ಸಮೀರ್ ಪ್ರೇಕ್ಷಕರನ್ನು ಸ್ತಂಭೀಭೂತರನ್ನಾಗಿಸಿದರು. ಇದರೊಂದಿಗೆ ಸೂಪರ್ ಸಿರೀಸ್ ಫೈನಲ್ ತಲುಪಿದ ಭಾರತದ ಮೂರನೇ ಬ್ಯಾಡ್ಮಿಂಟನ್ ಆಟಗಾರ ಎಂದೆನಿಸಿಕೊಂಡರು.

ಇತ್ತ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿ. ವಿ. ಸಿಂಧು ಜಯದ ಓಟ ಮುಂದುವರೆಸಿದರು. ಶುಕ್ರವಾರ ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ಸೋಲುಣಿಸಿದ್ದ ಹಾಂಕಾಂಗ್ ಆಟಗಾರ್ತಿ ಚೆಯುಂಗ್ ನ್ಯಾನ್ ಯಿ ಎದುರು ಭರ್ಜರಿ ಪ್ರದರ್ಶನ ನೀಡಿದ ಸಿಂಧು, 21-14 ಮತ್ತು 21-16ರ ಎರಡು ನೇರ ಗೇಮ್‌ಗಳಲ್ಲಿ ಜಯ ಸಾಧಿಸಿ ಫೈನಲ್ ತಲುಪಿದರು. ಆ ಮೂಲಕ ಸತತ ಮತ್ತೊಂದು ಸೂಪರ್ ಸಿರೀಸ್ ಗೆಲ್ಲುವ ಅಪೂರ್ವ ಅವಕಾಶವನ್ನು ಸಿಂಧು ಪಡೆದರು. ಒಟ್ಟಾರೆ ಟೂರ್ನಿಯ ಕೊನೆಯ ದಿನದಂದು ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತ ಸೆಣಸುತ್ತಿರುವುದು ಮಹತ್ವದ ಘಟ್ಟವೆನಿಸಿದೆ.

click me!