2ನೇ ಆವೃತ್ತಿಯ ಇಂಡಿಯನ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್’ಗಳ ಪ್ರಾಬಲ್ಯ ಮುಂದುವರೆದಿದ್ದು, ಒಟ್ಟು 12 ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಗುವಾಹಟಿ(ಮೇ.23): ಭಾರತದ ತಾರಾ ಬಾಕ್ಸರ್‌ಗಳಾದ ಶಿವ ಥಾಪ, ಅಮಿತ್ ಪಂಗಲ್ ಸೇರಿದಂತೆ 7 ಪುರುಷ ಬಾಕ್ಸರ್‌ಗಳು 2ನೇ ಆವೃತ್ತಿಯ ಇಂಡಿಯನ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಒಟ್ಟಾರೆ 12 ಬಾಕ್ಸರ್‌ಗಳು ಸೆಮಿಫೈನಲ್‌ಗೇರಿದ್ದಾರೆ. ಇದರೊಂದಿಗೆ ಭಾರತ ತಂಡದ ಖಾತೆಯಲ್ಲಿ 12 ಪದಕಗಳು ಖಚಿತವಾಗಿವೆ.
3ನೇ ದಿನವಾದ ಬುಧವಾರ ಇಲ್ಲಿ ನಡೆದ 60 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಶಿವ ಥಾಪ, ಮಾರಿಷಸ್‌ನ ಹೆಲ್ಲೆನೆ ಡಮೀನ್ ವಿರುದ್ಧ 5-0 ಬೌಟ್'ಗಳಲ್ಲಿ ಗೆದ್ದು ಸೆಮೀಸ್‌ಗೇರಿದರು. ನಾಲ್ಕರ ಘಟ್ಟದಲ್ಲಿ ಥಾಪ, ಪೋಲೆಂಡ್‌ನ ಕ್ರಿಸ್ಟಿಯನ್‌ರನ್ನು ಎದುರಿಸಲಿದ್ದಾರೆ.
52 ಕೆ.ಜಿ. ವಿಭಾಗದಲ್ಲಿ ಅಮಿತ್ ಪಂಗಲ್, ಬಲ್ಗೇರಿಯಾ ಬಾಕ್ಸರ್ ಎದುರು ಗೆಲುವು ಸಾಧಿಸಿದರು. ಉಳಿದಂತೆ ರಾಷ್ಟ್ರೀಯ ಚಾಂಪಿಯನ್ ಪ್ರಸಾದ್, ಮಾಜಿ ವಿಶ್ವ ಯೂತ್ ಚಾಂಪಿಯನ್ ಸಚಿನ್ ಸಿವಾಚ್, ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಲಂಕಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
ಸೆಮೀಸ್‌ನಲ್ಲಿ ಪಂಗಲ್, ಭಾರತದವರೇ ಆದ ಪಿ. ಎಲ್. ಪ್ರಸಾದ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಗೌರವ್ ಸೋಲಂಕಿ, ಮಾರಿಷಸ್‌ನ ಲೂಯಿಸ್ ಫ್ಲೇರಟ್ ವಿರುದ್ಧ 5-0 ಬೌಟ್‌ಗಳನ್ನು ಜಯ ದಾಖಲಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ಸಿವಾಚ್, ಭಾರತದವರೇ ಆದ ಗೌರವ್ ಸೋಲಂಕಿ ಎದುರು ಸೆಣಸಲಿದ್ದಾರೆ.
ಇನ್ನೊಂದು 69 ಕೆ.ಜಿ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಿನೇಶ್ ದಗಾರ್, ಎದುರಾಳಿ ಬಾಕ್ಸರ್ ಎದುರು 5-0 ಬೌಟ್‌ಗಳಲ್ಲಿ ಜಯ ದಾಖಲಿಸಿ ಸೆಮೀಸ್ ಗೇರಿದರು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ದಿನೇಶ್ ಅದ್ಭುತ ಆಟವಾಡಿದರು. ದಿನೇಶ್ ಪಂಚ್'ಗಳಿಗೆ ಎದುರಾಳಿ ಬಾಕ್ಸರ್ ಕಂಗಾಲಾದರು. ಏಷ್ಯನ್ ಚಾಂಪಿಯನ್‌ಶಿಪ್ ಬೆಳ್ಳಿ ವಿಜೇತ ಯುವ ಬಾಕ್ಸರ್ ಆಶೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾದ ಫ್ರಾನ್ಸಿಸ್ಕೊ ವೆರಾನ್ ವಿರುದ್ಧ 5-0 ಬೌಟ್‌ಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದರು.