
ಗಾಲೆ(ಜು.26): ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಟೆಸ್ಟ್ ಪರಿಣಿತ ಬ್ಯಾಟ್ಸ್'ಮನ್ ಚೇತೇಶ್ವರ ಪೂಜಾರ ಅವರ ಭರ್ಜರಿ ಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನವೇ ಶ್ರೀಲಂಕಾ ಎದುರು 399/3 ರನ್ ಬಾರಿಸುವ ಮೂಲಕ ಸಂಪೂರ್ಣ ಹಿಡಿತ ಸಾಧಿಸಿದೆ.
ಇಲ್ಲಿನ ಗಾಲೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್'ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತವೆದುರಾಯಿತು. ದೀರ್ಘಕಾಲದ ಬಳಿಕ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡಿದ್ದ ಅಭಿನವ್ ಮುಕುಂದ್(12) ನುವಾನ್ ಪ್ರದೀಪ್'ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ ಎರಡನೇ ವಿಕೆಟ್'ಗೆ ಜತೆಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಹಾಗೂ ಶಿಖರ್ ಧವನ್ ತಂಡಕ್ಕೆ ಬಲ ತುಂಬಿದರು.
ಚಾಂಪಿಯನ್ಸ್ ಟ್ರೋಫಿಯಿಂದಲೂ ಉತ್ತಮ ಫಾರ್ಮ್'ನಲ್ಲಿರುವ ಧವನ್ ಅಕ್ಷರಶಃ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 168 ಎಸೆತಗಳಲ್ಲಿ 190 ರನ್ ಬಾರಿಸಿದ ಧವನ್ ಕೇವಲ 10 ರನ್'ಗಳ ಅಂತರದಲ್ಲಿ ದ್ವಿಶತಕದಿಂದ ವಂಚಿತರಾದರು. ಧವನ್ ಸೊಗಸಾದ ಇನಿಂಗ್ಸ್'ನಲ್ಲಿ 31 ಮನಮೋಹಕ ಬೌಂಡರಿಗಳು ಸೇರಿದ್ದವು. ಒಂದು ಕಡೆ ಧವನ್ ಆರ್ಭಟಿಸುತ್ತಿದ್ದರೆ ಮತ್ತೊಂದೆಡೆ ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿದ ಚೇತೇಶ್ವರ ಪೂಜಾರ 144 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಧವನ್ ಔಟ್ ಆಗುತ್ತಿದ್ದಂತೆ ಕ್ರೀಸ್'ಗಿಳಿದ ನಾಯಕ ವಿರಾಟ್ ಕೊಹ್ಲಿ ಮತ್ತೆ ವಿಫಲರಾದರು. ಕೊಹ್ಲಿ ಕೇವಲ 3 ರನ್ ಬಾರಿಸಿ ನುವಾನ್ ಪ್ರದೀಪ್'ಗೆ ಮೂರನೇ ಬಲಿಯಾದರು. ಆನಂತರ ಕ್ರೀಸ್'ಗಿಳಿದ ಅಜಿಂಕ್ಯ ರಹಾನ್ 39 ರನ್ ಬಾರಿಸಿ ಧವನ್'ರೊಂದಿಗೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್: 399/3
ಶಿಖರ್ ಧವನ್ : 190
ಚೇತೇಶ್ವರ್ ಪೂಜಾರ : 144*
ನುವಾನ್ ಪ್ರದೀಪ್ : 64/3
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.