
ಗ್ವಾಂಗ್‌ಜು(ದಕ್ಷಿಣಕೊರಿಯಾ): ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 18 ವರ್ಷದ ಶೀತಲ್ ದೇವಿ ಇತಿಹಾಸ ಬರೆದಿದ್ದಾರೆ. ಕೈಗಳಿಲ್ಲದ ಮಹಿಳೆಯೊಬ್ಬರು ವಿಶ್ವ ಚಾಂಪಿಯನ್ ಆಗಿದ್ದು ಇದೇ ಮೊದಲು.
ಮತ್ತೊಂದೆಡೆ ವೈಯಕ್ತಿಕ ವಿಭಾಗದಲ್ಲಿ ತೋಮನ್ ಕುಮಾರ್ ಸ್ವರ್ಣ ಸೇರಿ ಭಾರತ ಕೂಟದಲ್ಲಿ 5 ಪದಕ ಜಯಿಸಿದೆ. ಮಹಿಳೆಯರ ಕಾಂಪೌಂಡ್ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಶೀತಲ್, ವಿಶ್ವ ನಂ.1 ಟರ್ಕಿಯ ಒಝರ್ ಗಿರ್ದಿ ವಿರುದ್ಧ 146-143ರಲ್ಲಿ ಗೆದ್ದರು. ಇದಕ್ಕೂ ಮೊದಲು ಶೀತಲ್ ಅವರು ತೋಮನ್ ಕುಮಾರ್‌ರ ಜತೆಗೂಡಿ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಕಂಚು ಗೆದ್ದಿದ್ದರು. ನಂತರ ನಡೆದ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ತೋಮರ್ ಭಾರತದ ರಾಕೇಶ್‌ರನ್ನು ಸೋಲಿಸಿದರು. ಮಹಿಳೆ ತಂಡ ವಿಭಾಗದಲ್ಲಿ ಶೀತಲ್ ಹಾಗೂ ಸರಿತಾ ಬೆಳ್ಳಿಗೆ ತೃಪ್ತಿಪಟ್ಟರು.
ನವದೆಹಲಿ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನವೇ ಭಾರತ ಮೂರು ಪದಕಗಳನ್ನು ಗೆದ್ದಿದೆ. ಪುರುಷರ ಹೈಜಂಪ್‌ನ ಟಿ63 ವಿಭಾಗ (ಕಾಲಿನ ದೌರ್ಬಲ್ಯ)ದಲ್ಲಿ ಶೈಲೇಶ್ ರ ಕುಮಾರ್ 1.91 ಮೀ. ಎತ್ತರಕ್ಕೆ ಜಿಗಿದು ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.
ಟಿ63 ವಿಭಾಗದಲ್ಲಿ ವಿಶ್ವದಾಖಲೆ ಹೊಂದಿರುವ ಹಾಗೂ ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್ ಅಮೆರಿಕದ ಎರ್ಜಾ ಫ್ರೆಚ್‌ರನ್ನು ಶೈಲೇಶ್ ಹಿಂದಿಕ್ಕಿದರು. ಫ್ರೆಚ್ 1.85 ಮೀ. ಜಿಗಿದು ಬೆಳ್ಳಿ ಪಡೆದರು. ಭಾರತದ ವರುಣ್ ಸಿಂಗ್ ಭಾಟಿಗೆ ಕಂಚು ಸಿಕ್ಕಿತು. ವರುಣ್ ಸಹ 1.85 ಮೀ. ಜಿಗಿದರು. ಆದರೆ ಫ್ರೆಚ್ ಕಡಿಮೆ ಯತ್ನಗಳನ್ನು ತೆಗೆದುಕೊಂಡ ಕಾರಣ ಅವರಿಗೆ ಬೆಳ್ಳಿ ದೊರೆಯಿತು.
ಕಳೆದ ಆವೃತ್ತಿಯ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಶೈಲೇಶ್, 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಿಯಾಗಿದ್ದರು. ಇನ್ನು, ಮಹಿಳೆಯರ 400 ಮೀ. ಟಿ20 ಫೈನಲ್‌ನಲ್ಲಿ ಭಾರತದ ದೀಪ್ತಿ ಜೀವನ್‌ಜಿ ಬೆಳ್ಳಿಗೆ ತೃಪ್ತಿಪಟ್ಟರು. ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ದೀಪ್ತಿ, 55.16 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು.
ಇಂದಿನಿಂದ ಏಷ್ಯನ್ ಆಕ್ವಾಟಿಕ್ ಕೂಟ
ಅಹಮದಾಬಾದ್: ಇಂದಿನಿಂದ ಅಹಮದಾಬಾದ್‌ನಲ್ಲಿ 11ನೇ ಏಷ್ಯನ್ ಆಕ್ವಾಟಿಕ್ ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, 29 ದೇಶಗಳ 1,100ಕ್ಕೂ ಹೆಚ್ಚು ಈಜುಪಟುಗಳು ಭಾಗಿಯಾಗಲಿದ್ದಾರೆ. ಭಾರತದಿಂದ ಪುರುಷರ ವಿಭಾಗದಲ್ಲಿ ಸಾಜನ್ ಪ್ರಕಾಶ್ ಮತ್ತು ಕರ್ನಾಟಕದ ಶ್ರೀಹರಿ ನಟರಾಜ್ ಅವರು ಪದಕ ಗೆಲ್ಲುವ ರೇಸ್‌ನಲ್ಲಿದ್ದಾರೆ.
ವನಿತೆಯರ ವಿಭಾಗದಲ್ಲಿ ರಾಜ್ಯದ ಧಿನಿಧಿ ದೇಸಿಂಘು, ಭವ್ಯ ಸಚ್ಚದೇವ್ ನಿರೀಕ್ಷೆ ಹುಟ್ಟಿಸಿದ್ದಾರೆ. 20 ಪುರುಷರು, 20 ವನಿತೆಯರನ್ನೊಳ ಗೊಂಡ ಒಟ್ಟು 40 ಈಜುಪಟುಗಳ ತಂಡ ಭಾರತವನ್ನು ಪ್ರತಿನಿಧಿ ಸಲಿದ್ದಾರೆ. ಅ.10ರ ತನಕ ಚಾಂಪಿಯನ್‌ಶಿಪ್ ನಡೆಯ ಲಿದೆ. ಈ ಕೂಟವು ಮುಂದಿನ ವರ್ಷ ಜಪಾನ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಅರ್ಹತಾ ಸುತ್ತು ಎನಿಸಿದೆ.
ಯು-17 ಸ್ಯಾಫ್ ಕಪ್: ಭಾರತ ಚಾಂಪಿಯನ್
ಕೊಲಂಬೊ: ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಸ್ಯಾಫ್) ಅಂಡರ್ - 17 ಚಾಂಪಿಯನ್‌ಶಿಪ್ ಅನ್ನು ಭಾರತ ತಂಡ ಗೆದ್ದಿದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ಫೈನಲ್‌ನಲ್ಲಿ ಶೂಟೌಟಲ್ಲಿ 4-1 ಗೋಲುಗಳ ಗೆಲುವು ಸಾಧಿಸಿ 7ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿ ಕೊಂಡಿತು. ನಿಗದಿತ ಸಮಯಕ್ಕೆ ಉಭಯ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು. ಕಳೆದ 5 ತಿಂಗಳಲ್ಲಿ ಭಾರತಕ್ಕಿದು 2ನೇ ಸ್ಯಾಫ್ ಕಪ್. ಮೇನಲ್ಲಿ ಭಾರತ ಅಂಡರ್-19 ತಂಡ ಪ್ರಶಸ್ತಿ ಗೆದ್ದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.