* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ
* ಕಾಮನ್‌ವೆಲ್ತ್ ಕೂಟದ 5ನೇ ದಿನ 4 ಪದಕ ಗೆದ್ದ ಭಾರತ
* ಸ್ಕ್ವಾಶ್‌ನಲ್ಲಿ ಐತಿಹಾಸಿಕ ಕಂಚು ಜಯಿಸಿದ ಸೌರವ್ ಘೋಷಾಲ್
ಬರ್ಮಿಂಗ್‌ಹ್ಯಾಮ್(ಆ.04): ಭಾರತದ ತಾರಾ ಸ್ಕ್ವಾಶ್ ಆಟಗಾರ ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದು ಕಾಮನ್‌ವೆಲ್ತ್ ಗೇಮ್ಸ್‌ನ ಸ್ಕ್ವಾಶ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಎನ್ನುವುದು ವಿಶೇಷ. ಬುಧವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸೌರವ್, ಕಳೆದ ಆವೃತ್ತಿಯ ಚಿನ್ನ ವಿಜೇತ ಇಂಗ್ಲೆಂಡ್‌ನ ಜೇಮ್ಸ್ ವಿಲ್ಸ್‌ಟ್ರೊಪ್ ವಿರುದ್ಧ 11-6, 11-1, 11-4 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು.
ಸೌರವ್ ಘೋಷಾಲ್ 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಇದಲ್ಲದೇ 2022ರ ವಿಶ್ವ ಡಬಲ್ಸ್ ಚಾಂಪಿಯನ್‌ಶಿಪ್ ಕೂಟದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನ, 2004ರ ಕೂಟದ ಪುರುಷರ ಡಬಲ್ಸ್, 2016ರ ಕೂಟದ ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಇನ್ನು 2014ರ ಏಷ್ಯನ್ ಗೇಮ್ಸ್‌ನಲ್ಲಿ ತಂಡ ವಿಭಾಗದಲ್ಲಿ ಚಿನ್ನ, ಸಿಂಗಲ್ಸ್‌ನಲ್ಲಿ ಬೆಳ್ಳಿ, 2006, 2010, 2018ರ ಏಷ್ಯನ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಕಂಚು, 2010, 2018ರಲ್ಲಿ ತಂಡ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ.
ಬೆಳ್ಳಿಗೆ ತೃಪ್ತಿಪಟ್ಟ ತುಲಿಕಾ
ಬರ್ಮಿಂಗ್‌ಹ್ಯಾಮ್: ಮಹಿಳೆಯರ ಜುಡೋ ಸ್ಪರ್ಧೆಯ 78+ ಕೆ.ಜಿ. ವಿಭಾಗದಲ್ಲಿ ಭಾರತದ ತುಲಿಕಾ ಮಾನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಆಕರ್ಷಕ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದ ದೆಹಲಿ ಮೂಲದ 23 ವರ್ಷದ ಜುಡೋ ಪಟು, ಫೈನಲ್‌ನಲ್ಲಿ ವಿಶ್ವ ನಂ.5, ಕೂಟದ ಅಗ್ರ ಶ್ರೇಯಾಂಕಿತೆ ಸ್ಕಾಟ್ಲೆಂಡ್‌ನ ಸಾರಾ ಆ್ಯಡ್ಲಿಂಗ್ಟನ್ ವಿರುದ್ಧ ಸೋಲು ಅನುಭವಿಸಿದರು. ಈ ಕ್ರೀಡಾಕೂಟದಲ್ಲಿ ಜುಡೋ ಸ್ಪರ್ಧೆಯಲ್ಲಿ ಭಾರತಕ್ಕೆ ದೊರೆತ 3ನೇ ಪದಕವಿದು. ತುಲಿಕಾ ಈ ಹಿಂದೆ 2019ರಲ್ಲಿ ಕಾಠ್ಮಂಡುನಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಬಾಕ್ಸಿಂಗ್ ಸೆಮೀಸ್‌ಗೆ ನೀತು, ಹುಸ್ಮುದ್ದೀನ್: 2 ಪದಕ ಖಚಿತ
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 2 ಪದಕ ಖಚಿತವಾಗಿದೆ. ಮಹಿಳೆಯರ 48 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ನೀತು ಗಂಘಾಸ್, ಉತ್ತರ ಐರ್ಲೆಂಡ್‌ನ ನಿಕೋಲ್ ಕ್ಲೈಡ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸುವ ಮೂಲಕ ಮೊದಲ ಪದಕ ಖಚಿತಪಡಿಸಿದರು. ಬಳಿಕ ಪುರುಷರ 57 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮೊಹಮದ್ ಹುಸ್ಮುದ್ದೀನ್ ನಮೀಬಿಯಾದ ಟ್ರೈಅಗೇನ್ ಮಾರ್ನಿಂಗ್ ವಿರುದ್ಧ 4-1ರಲ್ಲಿ ಜಯಿಸಿ ಸೆಮಿಫೈನಲ್ ಪ್ರವೇಶಿಸಿದರು. ಬಾಕ್ಸಿಂಗ್‌ನಲ್ಲಿ ಸೆಮೀಸ್‌ನಲ್ಲಿ ಸೋಲುವ ಬಾಕ್ಸರ್‌ಗಳಿಗೂ ಕಂಚಿನ ಪದಕ ಸಿಗಲಿದೆ.
Commonwealth Games 2022: ಕಂಚಿನ ಪದಕ ಗೆದ್ದು ಬೀಗಿದ ವೇಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್
ಹಾಕಿ: ಸೆಮೀಸ್ ಪ್ರವೇಶಿಸಿದ ಭಾರತ ಮಹಿಳಾ ತಂಡ
ಭಾರತ ಮಹಿಳಾ ಹಾಕಿ ತಂಡ ಕಾಮನ್‌ವೆಲ್ತ್ ಗೇಮ್ಸ್‌ನ ಸೆಮಿಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕೆನಡಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯಗಳಿಸಿತು. ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಸೆಮೀಸ್‌ನಲ್ಲಿ ಭಾರತಕ್ಕೆ ಆಸ್ಪ್ರೇಲಿಯಾ ಎದುರಾಗಲಿದೆ. ಇನ್ನು ಪುರುಷರ ತಂಡ ಗುಂಪು ಹಂತದ 3ನೇ ಪಂದ್ಯದಲ್ಲಿ ಬುಧವಾರ ಕೆನಡಾ ವಿರುದ್ಧ 8-0 ಗೋಲುಗಳ ಜಯ ಸಾಧಿಸಿ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಗುರುವಾರ ಅಂತಿಮ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4-4ರ ಡ್ರಾಗೆ ತೃಪ್ತಿಪಟ್ಟಿತ್ತು.