ಟೆನಿಸ್​ಗೆ ಸಾನಿಯಾ ಮಿರ್ಜಾ ವಿದಾಯ! ದುಬೈನಲ್ಲಿ ಕಟ್ಟ ಕಡೆಯ ಬಾರಿಗೆ ಕಣಕ್ಕಿಳಿಯೋ ಮೂಗುತಿ ಸುಂದರಿ

By Naveen KodaseFirst Published Jan 7, 2023, 1:36 PM IST
Highlights

ಟೆನಿಸ್ ವೃತ್ತಿಬದುಕಿಗೆ ಅಧಿಕೃತವಾಗಿ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾ
ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಟೆನಿಸ್ ಆಡಲಿರುವ ಮೂಗುತಿ ಸುಂದರಿ
2003ರಲ್ಲಿ ಟೆನಿಸ್ ವೃತ್ತಿಬದುಕು ಆರಂಭಿಸಿದ ಸಾನಿಯಾ

ನವದೆಹಲಿ(ಜ.07): ಭಾರತದ ತಾರಾ ಟೆನಿಸ್‌ ಪಟು ಸಾನಿಯಾ ಮಿರ್ಜಾ ತಮ್ಮ ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಲು ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ದುಬೈನಲ್ಲಿ ನಡೆಯಲಿರುವ WTA 1000 ಟೂರ್ನಿಯು ಸಾನಿಯಾ ಮಿರ್ಜಾ ಪಾಲಿಗೆ ಕಟ್ಟಕಡೆಯ ಟೆನಿಸ್ ಟೂರ್ನಿಯಾಗಲಿದೆ. 36 ವರ್ಷದ ಸಾನಿಯಾ ಮಿರ್ಜಾ, ಡಬಲ್ಸ್‌ನಲ್ಲಿ 6 ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸಿದ್ದು, ಇದೇ ಜನವರಿ 16ರಂದು ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಪಾಲಿನ ಕಟ್ಟಕಡೆಯ ಟೆನಿಸ್ ಗ್ರ್ಯಾನ್‌ಸ್ಲಾಂ ಆಡಲಿದ್ದಾರೆ.

WTA ಟೂರ್ಸ್‌ ವೆಬ್‌ಸೈಟ್‌ ಜತೆ ಮಾತನಾಡಿರುವ ಸಾನಿಯಾ ಮಿರ್ಜಾ, ಯುಎಸ್ ಓಪನ್ ಟೆನಿಸ್ ಟೂರ್ನಿಗೂ ಮುನ್ನ ನಡೆಯಲಿರುವ WTA ಫೈನಲ್ಸ್‌ನಲ್ಲಿ ಕೊನೆಯ ಬಾರಿಗೆ ಟೆನಿಸ್ ಆಡಲು ಕಣಕ್ಕಿಳಿಯಲಿದ್ದೇನೆ ಎನ್ನುವುದನ್ನು ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಖಚಿತಪಡಿಸಿದ್ದಾರೆ.

" ನಾನು WTA ಫೈನಲ್ಸ್‌ ಬಳಿಕ ಟೆನಿಸ್ ಆಡುವುದನ್ನು ನಿಲ್ಲಿಸಲಿದ್ದೇನೆ. ಯುಎಸ್ ಓಪನ್‌ ಟೂರ್ನಿಗೂ ಮುನ್ನ ನನ್ನ ಮೊಣಕೈ ಸ್ನಾಯು ಸೆಳೆತಕ್ಕೆ ಒಳಗಾಗಿದ್ದೆ. ನಾನೀಗ ಇದೆಲ್ಲದರಿಂದ ಹೊರಬರಬೇಕಿದೆ" ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೇ, ನಾನು ನನಗನಿಸಿದ್ದಷ್ಟನ್ನೇ ಮಾಡುತ್ತೇನೆ. ಹೀಗಾಗಿ ನಾನು ಮತ್ತೆ ಗಾಯಗೊಳ್ಳಲು ಬಯಸುವುದಿಲ್ಲ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.

ಅಖಿಲ ಭಾರತ ಮಹಿಳಾ ಕಬಡ್ಡಿ ಟೂರ್ನಿ: ಲಕ್ಷ-ಲಕ್ಷ ಬಹುಮಾನ ಗೆದ್ದ ಮಹಿಳಾ ತಂಡಗಳು..!

" ನನಗೀಗ 36 ವರ್ಷ, ನನ್ನ ದೇಹ ಸೋತಿದೆ. ಈ ಕಾರಣಕ್ಕಾಗಿಯೇ ನಾನು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ಇನ್ನಷ್ಟು ದೂರ ನಾನು ಸಾಗಲು ನನ್ನ ದೇಹ ಸ್ಪಂದಿಸುತ್ತಿಲ್ಲ. ನಾನು 2003ರಲ್ಲಿ ಟೆನಿಸ್ ಆಡಲು ಆರಂಭಿಸಿದೆ. ನಮ್ಮ ಆದ್ಯತೆಗಳು ಬದಲಾಗುತ್ತವೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.

ಸಾನಿಯಾ ಮಿರ್ಜಾ, 2005ರಲ್ಲಿ WTA ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಟೆನಿಸ್ ಆಟಗಾರ್ತಿ ಎನ್ನುವ ಇತಿಹಾಸ ನಿರ್ಮಿಸಿದ್ದರು. ಇನ್ನು 2007ರಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮೊದಲ ಬಾರಿಗೆ ಮಹಿಳಾ ಸಿಂಗಲ್ಸ್‌ WTA ಶ್ರೇಯಾಂಕದಲ್ಲಿ 27ನೇ ಸ್ಥಾನ ಪಡೆಯುವ ಮೂಲಕ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದರು.  

ಸಾನಿಯಾ ಮಿರ್ಜಾ, ಇದೇ ಜನವರಿ 16ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕಜಕಿಸ್ತಾನದ ಅನ್ನಾ ಡೇನಿಲಿನಾ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಇದಾದ ಬಳಿಕ ಫೆಬ್ರವರಿಯಲ್ಲಿ ದುಬೈನಲ್ಲಿ ಸಾನಿಯಾ ಮಿರ್ಜಾ ಕಟ್ಟಕಡೆಯ ಬಾರಿಗೆ ಟೆನಿಸ್ ಆಡಲಿದ್ದಾರೆ.

click me!