ಹಾಂಕಾಂಗ್ ಓಪನ್'ನಲ್ಲಿ ಸಿಂಧು ಬಳಿಕ ಸಮೀರ್ ವರ್ಮಾಗೂ ಫೈನಲ್ ಸೋಲು

By Suvarna Web DeskFirst Published Nov 27, 2016, 10:25 AM IST
Highlights

ಈ ಮಹತ್ವದ ಫೈನಲ್ ಸೋತರೂ ಸಮೀರ್ ವರ್ಮಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಹಂತಕ್ಕೇರಿದ ಮೂರನೇ ಭಾರತೀಯನೆನಿಸಿದ್ದಾರೆ.

ಹಾಂಕಾಂಗ್(ನ. 27): ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್'ಗೇರಿ ಅಚ್ಚರಿ ಹುಟ್ಟಿಸಿದ್ದ ಭಾರತದ ಸಮೀರ್ ವರ್ಮಾ ಅಂತಿಮ ಹಣಾಹಣಿಯಲ್ಲಿ ಎಡವಿ ರನ್ನರಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇಂದು ನಡೆದ ಫೈನಲ್'ನಲ್ಲಿ ಹಾಂಕಾಂಗ್'ನ ಲಾಂಗ್ ಆಂಗಸ್ ವಿರುದ್ಧ 14-21, 21-10, 11-21 ರಿಂದ ಸಮೀರ್ ವರ್ಮಾ ಸೋಲನುಭವಿಸಿದ್ದಾರೆ. 45 ನಿಮಿಷಗಳ ಕಾಲ ನಡೆದ ತುರುಸಿನ ಸ್ಪರ್ಧೆಯಲ್ಲಿ ಸಮೀರ್ ವರ್ಮಾ ಸೋಲುವ ಮುನ್ನ ಕೆಚ್ಚೆದೆಯ ಹೋರಾಟ ತೋರಿದ್ದಾರೆ.

ಮೊದಲ ಸೆಟ್ ಸೋತ ಬಳಿಕ ಎರಡನೇ ಸೆಟ್'ನಲ್ಲಿ ಸಮೀರ್ ಮಾಡಿದ ಕಂಬ್ಯಾಕ್'ನಿಂದ ಲೋಕಲ್ ಪ್ರೇಕ್ಷಕರು ಮೂಕವಿಸ್ಮಿತರಾದರು. ಆದರೆ, ಮೂರನೇ ಸೆಟ್'ನಲ್ಲಿ ವಿಶ್ವ ನಂ. 11 ಲಾಂಗ್ ಆಂಗಸ್ ಅದ್ಭುತ ಪ್ರದರ್ಶನ ತೋರಿ 15-6ರ ಮುನ್ನಡೆ ಪಡೆದುಕೊಂಡರು. ಆದರೆ, ಆ ಸಂದರ್ಭದಲ್ಲೂ ಧೃತಿಗೆಡದ ಸಮೀರ್ ವರ್ಮಾ ಸತತ ನಾಲ್ಕು ಪಾಯಿಂಟ್ ಗಳಿಸಿ ಪ್ರತಿಹೋರಾಟದ ಕುರುಹು ತೋರಿದರು. ಅದಾದ ನಂತರ, ಹಾಂಕಾಂಗ್ ಆಟಗಾರ ತನ್ನ ಹಿಡಿತವನ್ನು ಹೆಚ್ಚಿಸಿಕೊಂಡು ಪಂದ್ಯವನ್ನು ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು.

ಆದರೆ, ಈ ಮಹತ್ವದ ಫೈನಲ್ ಸೋತರೂ ಸಮೀರ್ ವರ್ಮಾ ಭಾರತೀಯ ಬ್ಯಾಡ್ಮಿಂಟನ್'ಗೆ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಹಂತಕ್ಕೇರಿದ ಮೂರನೇ ಭಾರತೀಯನೆನಿಸಿದ್ದಾರೆ. ಸೈನಾ ನೆಹ್ವಾಲ್, ಪಿವಿ ಸಿಂಧು ಅವರು ಈ ಸಾಧನೆ ಮಾಡಿದ ಇನ್ನಿಬ್ಬರು ಭಾರತೀಯರಾಗಿದ್ದಾರೆ.

ಇದೇ ವೇಳೆ, ಹಾಂಕಾಂಗ್ ಓಪನ್'ನಲ್ಲಿ ಇಂದು ನಡೆದ ಮಹಿಳಾ ಫೈನಲ್'ನಲ್ಲಿ ಭಾರತದ ಪಿ.ವಿ.ಸಿಂಧು ಅವರು ಚೈನೀ ಥೈಪೆ ದೇಶದ ಆಟಗಾರ್ತಿ ಎದುರು ಸೋಲನುಭವಿಸಿದ್ದಾರೆ.

click me!