ಆರ್ಲಿನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌ಗೆ ನಿರಾಸೆ
ಮೊದಲ ಸುತ್ತಲ್ಲೇ ಸೋತು ಹೊರಬಿದ್ದ ಸೈನಾ ನೆಹ್ವಾಲ್
ಕರ್ನಾಟಕದ ಮಿಥುನ್ ಮಂಜುನಾಥ್ ಹಾಗೂ ತಾನ್ಯಾ ಹೇಮಂತ್ ಎರಡನೇ ಸುತ್ತು ಪ್ರವೇಶ
ಆರ್ಲಿನ್ಸ್(ಫ್ರಾನ್ಸ್): ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ಆರ್ಲಿನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅವರು ಟರ್ಕಿಯ ನೆಸ್ಲಿಹಾನ್ ವಿರುದ್ಧ 16-21, 14-21 ನೇರ ಗೇಮ್ಗಳಲ್ಲಿ ಪರಾಭವಗೊಂಡರು. ಆಕರ್ಷಿ ಕಶ್ಯಪ್, ತಸ್ನೀಮ್ ಮೀರ್ ಕೂಡಾ ಸೋಲನುಭವಿಸಿದರು. ಇದೇ ವೇಳೆ ಕರ್ನಾಟಕದ ಮಿಥುನ್ ಮಂಜುನಾಥ್ ಹಾಗೂ ತಾನ್ಯಾ ಹೇಮಂತ್ ಕ್ರಮವಾಗಿ ಪುರುಷ, ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಸುತ್ತಿಗೇರಿದರು.
ರ‍್ಯಾಂಕಿಂಗ್: ಅಗ್ರ 10ಕ್ಕೆ ಮರಳಿದ ಪಿ.ವಿ.ಸಿಂಧು
ನವದೆಹಲಿ: ಕಳೆದ ವಾರ ಮ್ಯಾಡ್ರಿಡ್ ಮಾಸ್ಟರ್ಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಶಟ್ಲರ್ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಮತ್ತೆ ಅಗ್ರ 10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಂಗಳವಾರ ಪ್ರಕಟಗೊಂಡ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯಲ್ಲಿ 2 ಸ್ಥಾನ ಏರಿಕೆ ಕಂಡು 63,398 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿದ್ದಾರೆ.
2 ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಕಳೆದ ವಾರ 2016ರ ಬಳಿಕ ಮೊದಲ ಬಾರಿಗೆ ಅಗ್ರ 10ರಿಂದ ಹೊರಬಿದ್ದಿದ್ದರು. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಅಗ್ರ 10ರಲ್ಲಿರುವ ಏಕೈಕ ಭಾರತೀಯ ಎನಿಸಿದ್ದು, ಅವರು 9ನೇ ಸ್ಥಾನದಲ್ಲಿದ್ದಾರೆ.
ವೇಟ್‌ಲಿಫ್ಟರ್ ಸಂಜಿತಾಗೆ ನಾಡಾ 4 ವರ್ಷ ನಿಷೇಧ
ನವದೆಹಲಿ: ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ 2 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಭಾರತದ ವೇಟ್‌ಲಿಫ್ಟರ್ ಸಂಜಿತಾ ಚಾನುಗೆ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ(ನಾಡಾ) 4 ವರ್ಷ ನಿಷೇಧ ಹೇರಿದೆ. 29 ವರ್ಷದ ಸಂಜಿತಾ ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ವೇಳೆ ಸಂಗ್ರಹಿಸಲಾಗಿತ್ತು. ಪರೀಕ್ಷೆ ವೇಳೆ ಅವರು ನಿಷೇಧಿತ ಮದ್ದು ಸೇವಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನಾಡಾ ಕಠಿಣ ಕ್ರಮ ಕೈಗೊಂಡಿದೆ.
ಲಿಯಾಂಡರ್ ಪೇಸ್ ಜತೆ ಬಾಲಿವುಡ್ ನಟಿ ಕಿಮ್ ಶರ್ಮಾ ಬ್ರೇಕಪ್..? 2 ವರ್ಷದ ಸಂಬಂಧಕ್ಕೆ ವಿದಾಯ
ಈ ಮೊದಲು 2018ರಲ್ಲಿ ಸಂಜಿತಾಗೆ ಅಂ.ರಾ. ವೇಟ್ಲಿಫ್ಟಿಂಗ್ ಫೆಡರೇಷನ್ ಡೋಪಿಂಗ್ ಪ್ರಕರಣದಲ್ಲಿ ನಿಷೇಧ ಹೇರಿತ್ತು. ಆದರೆ 2020ರಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಸಂಜಿತಾ 2014ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ 48 ಕೆ.ಜಿ. ವಿಭಾಗದಲ್ಲಿ ಚಿನ್ನ, 2018ರಲ್ಲಿ 53 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.
ವನಿತಾ ಫುಟ್ಬಾಲ್: ರಾಜ್ಯಕ್ಕೆ ಇಂದು ಮಣಿಪುರ ಸವಾಲು
ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ನೇರವಾಗಿ ಪ್ರಧಾನ ಸುತ್ತಿಗೇರುವ ನಿರೀಕ್ಷೆಯಲ್ಲಿರುವ ಆತಿಥೇಯ ಕರ್ನಾಟಕ ನಿರ್ಣಾಯಕ ಕೊನೆ ಪಂದ್ಯದಲ್ಲಿ ಗುರುವಾರ ಬಲಿಷ್ಠ ಮಣಿಪುರ ವಿರುದ್ಧ ಸೆಣಸಾಡಲಿದೆ. ಗುಂಪು-6ರಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಹಾಗೂ 21 ಬಾರಿ ಚಾಂಪಿಯನ್ ಮಣಿಪುರ ತಂಡಗಳು ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಗೋಲು ವ್ಯತ್ಯಾಸದಲ್ಲಿ ರಾಜ್ಯ ತಂಡ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಅಂತಿಮ ಸುತ್ತಿಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡ ಉಳಿದ ಗುಂಪುಗಳ ಫಲಿತಾಂಶಗಳಿಗೆ ಕಾಯಬೇಕಿದೆ.