
ನವದೆಹಲಿ(ಅ.20): ಬಿಸಿಸಿಐನಿಂದ ಪದೇಪದೇ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಕೇರಳ ವೇಗಿ ಶ್ರೀಶಾಂತ್ ಇದೀಗ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಪ್ರಬಲ ತಿರುಗೇಟು ನೀಡಲು ಮುಂದಾಗಿದ್ದಾರೆ.
ಹೌದು, 2013ರ ಐಪಿಎಲ್'ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿರುವ ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ಬೇರೆ ದೇಶವನ್ನು ಪ್ರತಿನಿಧಿಸುವ ಮನಸು ಮಾಡಿರುವುದಾಗಿ ಶ್ರೀಶಾಂತ್ ಹೇಳಿದ್ದಾರೆ.
ಏಷ್ಯಾನೆಟ್ ನ್ಯೂಸ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಬಿಸಿಸಿಐ ನನ್ನ ಮೇಲೆ ನಿಷೇಧ ಹೇರಿದೆಯೇ ಹೊರತು, ಐಸಿಸಿ ನನ್ನ ಮೇಲೆ ನಿಷೇಧ ಹೇರಿಲ್ಲ. ಅಲ್ಲದೇ ನನಗೆ ಬಿಸಿಸಿಐ ಭಾರತದಲ್ಲಿ ಆಡಲು ನಿಷೇಧ ಹೇರಿದೆ. ಖಾಸಗಿ ಸಂಸ್ಥೆಯಾದ ಬಿಸಿಸಿಐ ನಿಷೇಧ ಹೇರಿದ ಮಾತ್ರಕ್ಕೆ ನಾನು ವಿದೇಶದಲ್ಲಿ ಆಡಬಾರದು ಎಂದೇನಿಲ್ಲವಲ್ಲ ಎಂದು ಹೇಳಿದ್ದಾರೆ.
ನನಗಿನ್ನು 34 ವರ್ಷ, ಇನ್ನೂ 6 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ನನಗಿದೆ. ಹಾಗಾಗಿ ನಾನು ಬೇರೆ ದೇಶವನ್ನು ಪ್ರತಿನಿಧಿಸುವ ಯೋಚನೆಯಲ್ಲಿದ್ದೇನೆ ಎಂದು ಎರಡು ವಿಶ್ವಕಪ್(1ಟಿ20 ಹಾಗೂ 1 ಏಕದಿನ) ವಿಜೇತ ತಂಡದ ಸದಸ್ಯ ಶ್ರೀಶಾಂತ್ ಹೇಳಿದ್ದಾರೆ.
ಇದೇ ವರ್ಷ ಸಪ್ಟಂಬರ್ 18 ರಂದು ಕೇರಳ ಹೈಕೋರ್ಟ್ನ ಏಕ ಸದಸ್ಯ ಪೀಠ ಶ್ರೀಶಾಂತ್'ರ ನಿಷೇಧವನ್ನ ತೆರವು ಗೊಳಿಸುವಂತೆ ಆದೇಶಿಸಿತ್ತು. ಆದರೆ ಬಿಸಿಸಿಐ ಕಳೆದ ತಿಂಗಳು ಕೇರಳದ ದ್ವಿಸದಸ್ಯ ಪೀಟಕ್ಕೆ ಮೇಲ್ಮನವಿ ಸಲ್ಲಿಸಿತ್ತು. ನಂತರ ದ್ವಿಸದಸ್ಯ ಪೀಠ ಮಂಗಳವಾರವಷ್ಟೇ ಬಿಸಿಸಿಐ ನಿರ್ಧಾರವನ್ನ ಎತ್ತಿಹಿಡಿದು ಶ್ರೀಶಾಂತ್ ಮೇಲಿನ ನಿಷೇಧವನ್ನ ಮುಂದುವರಿಸುವಂತೆ ಆದೇಶಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.