ಇಂದಾದ್ರೂ ಗೆಲ್ತಾರಾ ಆರ್’ಸಿಬಿ..? ಎಬಿಡಿ-ಕೊಹ್ಲಿ ಮೇಲೆ ಎಲ್ಲರ ಕಣ್ಣು

First Published Apr 29, 2018, 6:30 PM IST
Highlights

ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆಲುವು ಸಾಧಿಸಿ, 4ರಲ್ಲಿ ಸೋತಿರುವ ಆರ್‌'ಸಿಬಿ ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಸೇರಿದಂತೆ ಇನ್ನು 8 ಪಂದ್ಯಗಳು ಬಾಕಿಯಿದ್ದು, ಮುಂದಿನ ಹಂತಕ್ಕೇರಲು ಆರ್'ಸಿಬಿ ಕನಿಷ್ಠ 6 ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ. ಒಂದೇ ಒಂದು ಸಣ್ಣ ಎಡವಟ್ಟು ಮಾಡಿಕೊಂಡರು, ‘ಕಪ್ ನಮ್ದೆ’ ಎನ್ನುತ್ತಿರುವ ಆರ್‌'ಸಿಬಿ ಭಾರೀ ಬೆಲೆ ತೆರಬೇಕಾಗುತ್ತದೆ.

ಬೆಂಗಳೂರು[ಏ.29]: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಕೋಲ್ಕತಾ ನೈಟ್ ರೈಡರ್ಸ್‌ ಸವಾಲನ್ನು ಎದುರಿಸಲಿದೆ.   ಪ್ಲೇ-ಆಫ್’ಗೇರುವ ದೃಷ್ಟಿಯಿಂದ ಆರ್‌’ಸಿಬಿಗಿದು ಮಹತ್ವದ ಪಂದ್ಯವಾಗಿದೆ. ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆಲುವು ಸಾಧಿಸಿ, 4ರಲ್ಲಿ ಸೋತಿರುವ ಆರ್‌'ಸಿಬಿ ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯ ಸೇರಿದಂತೆ ಇನ್ನು 8 ಪಂದ್ಯಗಳು ಬಾಕಿಯಿದ್ದು, ಮುಂದಿನ ಹಂತಕ್ಕೇರಲು ಆರ್'ಸಿಬಿ ಕನಿಷ್ಠ 6 ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ. ಒಂದೇ ಒಂದು ಸಣ್ಣ ಎಡವಟ್ಟು ಮಾಡಿಕೊಂಡರು, ‘ಕಪ್ ನಮ್ದೆ’ ಎನ್ನುತ್ತಿರುವ ಆರ್‌'ಸಿಬಿ ಭಾರೀ ಬೆಲೆ ತೆರಬೇಕಾಗುತ್ತದೆ. ಆದಕಾರಣ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಚಾಂಪಿಯನ್ಸ್‌'ಗಳಂತೆ ಆಡಬೇಕಿದೆ. ಕಳೆದ ಹಲವು ಆವೃತ್ತಿಗಳಲ್ಲಿ ಮೊದಲ ಪಂದ್ಯಗಳಲ್ಲಿ ಸೋತು, ಬಳಿಕ ಕೊನೆಯ ಹಂತದ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೇರುತ್ತಿರುವ ಆರ್'ಸಿಬಿ ಈ ಬಾರಿಯೂ ಅದೇ ಆಟ ಆಡುವುದೇ ಎಂಬುದನ್ನು ಕಾದುನೋಡಬೇಕಿದೆ.
ಈ ಆವೃತ್ತಿಯಲ್ಲಿ 2ನೇ ಬಾರಿ ಎರಡು ತಂಡಗಳು ಮುಖಾಮುಖಿ ಆಗುತ್ತಿದ್ದು, ಮೊದಲ ಪಂದ್ಯದಲ್ಲಿ ಕೆಕೆಆರ್ 4 ವಿಕೆಟ್‌'ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಇದೇ ಚಿನ್ನಸ್ವಾಮಿ ಅಂಗಳದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಂಬಟಿ ರಾಯುಡು ಹಾಗೂ ಎಂ.ಎಸ್.ಧೋನಿ, ಆರ್‌ಸಿಬಿ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಪಂದ್ಯದಿಂದ ಪಂದ್ಯಕ್ಕೆ ಬೌಲರ್‌'ಗಳು ದುಬಾರಿ ಆಗುತ್ತಿರುವುದು ಕೊಹ್ಲಿ ನಿದ್ದೆ ಗೆಡಿಸಿದೆ. ವೇಗಿಗಳು ಲಯ ಕಂಡುಕೊಳ್ಳಲು ಒದ್ದಾಡುತ್ತಿದ್ದರೆ, ಸ್ಪಿನ್ನರ್‌'ಗಳಿಂದಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡುಬರುತ್ತಿಲ್ಲ. ಈ ದೃಷ್ಟಿಯಲ್ಲಿ ತಂಡದಲ್ಲಿ ಮಹತ್ವದ ಬದಲಾವಣೆ ಅಗತ್ಯವಿದೆ. ಕೋರಿ ಆ್ಯಂಡರ್ಸನ್, ಮೊಹಮಹ್ ಸಿರಾಜ್ ಬದಲಿಗೆ ಟಿಮ್ ಸೌಥಿ, ಮೊಯಿನ್ ಅಲಿಗೆ ತಂಡದಲ್ಲಿ ಸ್ಥಾನ ನೀಡಬೇಕಿದೆ.
ಇನ್ನು ತಂಡದ ಬ್ಯಾಟಿಂಗ್ ಶಕ್ತಿಯುತವಾಗಿದ್ದು, ಡಿಕಾಕ್, ಡಿವಿಲಿಯರ್ಸ್‌, ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌'ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮನ್‌'ದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಉತ್ತಮ ಪ್ರದರ್ಶನ ತೋರುತ್ತಿದ್ದು, ಸುಂದರ್‌'ಗೆ ಬಡ್ತಿ ನೀಡಬೇಕಿದೆ. ಆದರೆ, ಬೌಲರ್‌'ಗಳು ಸಂಘಟಿತ ದಾಳಿ ನಡೆಸದಿದ್ದರೆ, ಇಂದಿನ ಪಂದ್ಯ ಕೂಡ ಆರ್‌'ಸಿಬಿಗೆ ಕಬ್ಬಿಣದ ಕಡಲೆ ಆಗಲಿದೆ.

ಕೆಕೆಆರ್‌'ಗೆ ಬೌಲಿಂಗ್‌ನದ್ದೇ ಚಿಂತೆ: ಇತ್ತ ಆರ್‌'ಸಿಬಿಗೆ ಹೋಲಿಕೆ ಮಾಡಿದರೆ ಕೆಕೆಆರ್ ಪರಿಸ್ಥಿತಿ ಸಹ ಭಿನ್ನವಾಗಿಲ್ಲ. ಆಡಿರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು, 4ರಲ್ಲಿ ಸೋಲುಂಡಿದೆ. ಕೆಕೆಆರ್‌'ಗೂ ಬೌಲಿಂಗ್‌ನದ್ದೇ ಚಿಂತೆಯಾಗಿದೆ. ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಮಿಚೆಲ್ ಜಾನ್ಸನ್, ಪೃಥ್ವಿ ಶಾನಂತಹ ಕಿರಿಯ ಆಟಗಾರನಿಂದ ದಂಡನೆಗೆ ಒಳಗಾಗುತ್ತಿದ್ದಾರೆ. ಸುನಿಲ್ ನರೈನ್, ಕುಲ್ದೀಪ್ ಯಾದವ್ ಹಾಗೂ ಪಿಯೂಷ್ ಚಾವ್ಲಾರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರುತ್ತಿಲ್ಲ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ತಂಡ ಪ್ರಬಲ ಎನಿಸಿದರು ಪಂದ್ಯವನ್ನೇ ಬದಲಿಸುವ ಸಾಮರ್ಥ್ಯವಿರುವ ನರೈನ್, ಲಾಟರಿಯಂತೆ ಆಗಿದ್ದಾರೆ. ರಸೆಲ್, ರಾಬಿನ್ ಉತ್ತಪ್ಪ ಕೊಂಚ ಮಂಕಾಗಿದ್ದು, ದಿನೇಶ್ ಕಾರ್ತಿಕ್ ಮೇಲೆ ಹೆಚ್ಚಿನ ಒತ್ತಡವಿದೆ.
ಒಟ್ಟಾರೆ ತನ್ನಷ್ಟೇ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿರುವ ಕೆಕೆಆರ್ ಅನ್ನು ಮಣಿಸಿ ಮತ್ತೆ ಜಯದ ಹಾದಿಗೆ ಮರಳಲು ಆರ್'ಸಿಬಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ಪಂದ್ಯ ಆರ್‌ಸಿಬಿ ಟರ್ನಿಂಗ್ ಪಾಯಿಂಟ್
ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

click me!