
ಜೊಹಾನ್ಸ್'ಬರ್ಗ್(ಜ.23): ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತ ಬಳಿಕ, ಭಾರತ ತಂಡ ಸೋಲಿಗೆ ಕಾರಣಗಳನ್ನು ಹುಡುಕುತ್ತಿದೆ. 3ನೇ ಟೆಸ್ಟ್ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇದ್ದು, ಈ ಪಂದ್ಯದಲ್ಲಾದರೂ ಗೆದ್ದು ಇಲ್ಲವೇ ಡ್ರಾ ಮಾಡಿಕೊಂಡು ವೈಟ್'ವಾಶ್ ಮುಖಭಂಗ ತಪ್ಪಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆ ಭರ್ಜರಿ ತಯಾರಿ ನಡೆಸುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ, ಅಭ್ಯಾಸದ ಕೊರತೆ ಹಾಗೂ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಇದ್ದಿದ್ದೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಡಿಸೆಂಬರ್ 28ರಂದು ದಕ್ಷಿಣ ಆಫ್ರಿಕಾ ತಲುಪಿದ್ದ ಭಾರತ ತಂಡ, ಜನವರಿ 5ರಿಂದ ಮೊದಲ ಟೆಸ್ಟ್ ಆಡಲು ಆರಂಭಿಸಿತು. ಅಭ್ಯಾಸಕ್ಕೆ ಒಂದು ವಾರ ಸಮಯ ಸಾಕಾಗಲಿಲ್ಲ ಎಂದು ಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
‘ತವರಿನಲ್ಲಿ ವಾತಾವರಣ, ಪಿಚ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರಲಿದೆ. ಹೀಗಾಗಿ ಗೆಲುವು ಕಷ್ಟವಾಗುವುದಿಲ್ಲ. ಆದರೆ ವಿದೇಶಗಳಲ್ಲಿ ಸ್ಥಿತಿಯೇ ಬೇರೆ ಇರಲಿದ್ದು, 2 ವಾರಗಳು ಮುಂಚಿತವಾಗಿಯೇ ಆಗಮಿಸಿದರೆ ಖಂಡಿತವಾಗಿಯೂ ಫಲಿತಾಂಶದಲ್ಲಿ ವ್ಯತ್ಯಾಸ ಕಾಣುತಿತ್ತು’ ಎಂದು ಶಾಸ್ತ್ರಿ ಹೇಳಿದ್ದಾರೆ.
ಈ ಹೇಳಿಕೆಯೊಂದಿಗೆ ತಂಡದ ಕೋಚ್'ಗೂ ಕೂಡ ಬಿಸಿಸಿಐ ವೇಳಾಪಟ್ಟಿ ರಚಿಸುತ್ತಿರುವ ರೀತಿ ಬಗ್ಗೆ ಅಸಮಾಧಾನವಿದೆ ಎನ್ನುವುದು ಸ್ಪಷ್ಟವಾಗಿದೆ. ಆಫ್ರಿಕಾ ಪ್ರವಾಸಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ಸಹ, ಇಕ್ಕಟ್ಟಿನ ವೇಳಾಪಟ್ಟಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಟೆಸ್ಟ್ ತಜ್ಞರನ್ನು ಮುಂಚಿತವಾಗಿಯೇ ಆಫ್ರಿಕಾಗೆ ಕಳುಹಿಸುವ ಬಿಸಿಸಿಐ ಪ್ರಸ್ತಾಪವನ್ನು ಪರಿಗಣಿಸಲಿಲ್ಲ ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಾಸ್ತ್ರಿ , ‘ಆ ಆಲೋಚನೆ ಇತ್ತು. ಆದರೆ ಕೆಲವರನ್ನು ಮಾತ್ರ ಕಳುಹಿಸುವುದು ಅಷ್ಟು ಸರಿಯಲ್ಲ ಎನಿಸಿತು. ಈಗ ಆ ಮಾತು ಅನಗತ್ಯ. ಮುಂದಿನ ದಿನಗಳಲ್ಲಿ ತಂಡ 2 ವಾರಗಳ ಕಾಲ ಮುಂಚಿತವಾಗಿಯೇ ತೆರಳಿದರೆ ಅನುಕೂಲವಾಗಲಿದೆ. ಈ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಬೇಕಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.