
ಕೋಲ್ಕತಾ[ಮೇ.25]: ಆರಂಭದಲ್ಲಿ ಕೆಕೆಆರ್ ಬೌಲರ್’ಗಳ ಶಿಸ್ತಿನ ದಾಳಿಯ ಹೊರತಾಗಿಯೂ ಕೊನೆಯಲ್ಲಿ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್’ರೈಸರ್ಸ್ ಹೈದರಾಬಾದ್ 174 ರನ್’ಗಳ ಸವಾಲಿನ ಮೊತ್ತ ಕಲೆ ಹಾಕಿದೆ.
ಇಲ್ಲಿನ ಈಡನ್’ಗಾರ್ಡನ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಮಂದಗತಿಯ ಆರಂಭವನ್ನು ಪಡೆಯಿತು. ಮೊದಲ 7 ಓವರ್’ಗಳಲ್ಲಿ 56 ರನ್ ಕಲೆಹಾಕಿತ್ತು. ಮೊದಲ ವಿಕೆಟ್’ಗೆ ಧವನ್-ಸಾಹ 56 ರನ್ ಬಾರಿಸಿದ್ದರು. ಈ ವೇಳೆ 8ನೇ ಓವರ್’ನಲ್ಲಿ ದಾಳಿ ನಡೆಸಿದ ಕುಲ್ದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು. ಧವನ್ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಅದೇ ಓವರ್ ಕೊನೆ ಎಸೆತದಲ್ಲಿ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಮತ್ತೋರ್ವ ಆರಂಭಿಕ ಸಾಹ 35 ರನ್ ಬಾರಿಸಿ ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಸಿದರು.
ಇನ್ನು 4ನೇ ವಿಕೆಟ್’ಗೆ ಜತೆಯಾದ ಶಕೀಬ್ ಅಲ್ ಹಸನ್-ದೀಪಕ್ ಹೂಡಾ 29 ರನ್’ಗಳ ಜತೆಯಾಟದಲ್ಲಿ ಭಾಗಿಯಾಯಿತು. ಶಕೀಬ್[28] ತಂಡವನ್ನು ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ 18.1 ಓವರ್’ಗಳಲ್ಲಿ 138 ರನ್’ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್ ತಂಡದ ರನ್ ವೇಗಕ್ಕೆ ರಶೀದ್ ಖಾನ್ ಚುರುಕು ಮುಟ್ಟಿಸಿದರು. ಕೇವಲ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸ್ಫೋಟಕ ಸಿಕ್ಸರ್’ಗಳ ನೆರವಿನಿಂದ 34 ರನ್ ಸಿಡಿಸುವುದರೊಂದಿಗೆ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಕೆಕೆಆರ್ ಪರ ಕುಲ್ದೀಪ್ 2 ವಿಕೆಟ್ ಪಡೆದರೆ, ಶಿವಂ ಮಾವಿ, ನರೈನ್ ಹಾಗೂ ಪಿಯೂಷ್ ಚಾವ್ಲಾ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಸನ್’ರೈಸರ್ಸ್ ಹೈದರಾಬಾದ್: 174/7
ವೃದ್ದಿಮಾನ್ ಸಾಹಾ: 35
ಕುಲ್ದೀಪ್: 29/2
[* ವಿವರ ಅಪೂರ್ಣ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.