
ಶಿವಮೊಗ್ಗ[ಡಿ.26]: 2018-19ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಕ್ವಾರ್ಟರ್ ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ರೈಲ್ವೇಸ್ ವಿರುದ್ಧ ಮಂಗಳವಾರ ಇಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ 176 ರನ್‌ಗಳ ಅಮೋಘ ಗೆಲುವು ಸಾಧಿಸಿದ ರಾಜ್ಯ ತಂಡ, 6 ಅಂಕ ಕಲೆಹಾಕಿ ‘ಎ’ ಗುಂಪಿನಲ್ಲಿ 3ನೇ ಸ್ಥಾನಕ್ಕೇರಿದೆ. ‘ಎ’ ಹಾಗೂ ‘ಬಿ’ನಿಂದ ಸೇರಿ ಅಗ್ರ 5 ತಂಡಗಳು ಮಾತ್ರ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದು, ಒಟ್ಟಾರೆ ತಂಡಗಳ ಅಂಕಪಟ್ಟಿಯಲ್ಲಿ ತಂಡ 4ನೇ ಸ್ಥಾನ ಪಡೆದುಕೊಂಡಿದೆ.
ಪಂದ್ಯದ ಅಂತಿಮ ದಿನವಾದ ಮಂಗಳವಾರ ರೈಲ್ವೇಸ್ ಗೆಲುವಿಗೆ 318 ರನ್‌ಗಳು ಬೇಕಿತ್ತು. ರಾಜ್ಯಕ್ಕೆ 9 ವಿಕೆಟ್‌ಗಳ ಅಗತ್ಯವಿತ್ತು. 1 ವಿಕೆಟ್ ನಷ್ಟಕ್ಕೆ 44 ರನ್‌ಗಳಿಂದ ದಿನದಾಟವನ್ನು ಆರಂಭಿಸಿದ ರೈಲ್ವೇಸ್, ರಾಜ್ಯದ ಬೌಲರ್‌ಗಳನ್ನು ತಾಳ್ಮೆ ಪರೀಕ್ಷಿಸಿತು. ಆರಂಭಿಕ ಸೌರಭ್ ವಕಾಸ್ಕರ್ 96 ಎಸೆತಗಳನ್ನು ಎದುರಿಸಿ 43 ರನ್ ಗಳಿಸಿದರು. ರೈಲ್ವೇಸ್ ತಂಡದ ಮೊತ್ತ 85 ರನ್ ಆಗಿದ್ದಾಗ, ಕರ್ನಾಟಕಕ್ಕೆ ದಿನದ ಮೊದಲ ಯಶಸ್ಸು ದೊರೆಯಿತು. ಸೌರಭ್ ರನೌಟ್ ಬಲೆಗೆ ಬಿದ್ದು ಪೆವಿಲಿಯನ್ ಸೇರಿಕೊಂಡರು.
3ನೇ ವಿಕೆಟ್‌ಗೆ ಜೊತೆಯಾದ ನಿತಿನ್ ಭಿಲ್ಲೆ ಹಾಗೂ ಪ್ರಥಮ್ ಸಿಂಗ್, 20 ಓವರ್ ಒಟ್ಟಿಗೆ ಬ್ಯಾಟ್ ಮಾಡಿದರು. ಭೋಜನ ವಿರಾಮದ ವೇಳೆಗೆ ತಂಡ 2 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. 2ನೇ ಅವಧಿಯ ಆರಂಭದಲ್ಲೇ ನಿತಿನ್ (39) ವಿಕೆಟ್ ಕಿತ್ತ ಸ್ಪಿನ್ನರ್ ಕೆ.ಗೌತಮ್ ಕರ್ನಾಟಕಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಆದರೆ ಪ್ರಥಮ್ ಸಿಂಗ್ ಹಾಗೂ ನಾಯಕ ಅರಿಂದಾಮ್ ಘೋಷ್ ನಡುವಿನ ಜೊತೆಯಾಟ ಕರ್ನಾಟಕದ ಪಾಳಯದಲ್ಲಿ ಆತಂಕ ಮೂಡಿಸಿತು. ಈ ಇಬ್ಬರು 25 ಓವರ್ ಬ್ಯಾಟ್ ಮಾಡಿದರೂ ಗಳಿಸಿದ್ದು ಮಾತ್ರ 33 ರನ್. ಕರ್ನಾಟಕ ಗೆಲುವಿನ ಆಸೆ ಕೈಬಿಟ್ಟು ಡ್ರಾಗೆ ತೃಪ್ತಿಪಡಲು ಸಿದ್ಧಗೊಳ್ಳುತಿತ್ತು. ಪ್ರಥಮ್ ಸಿಂಗ್ (48) ಔಟಾಗುತ್ತಿದ್ದಂತೆ ಚಹಾ ವಿರಾಮ ತೆಗೆದುಕೊಳ್ಳಲಾಯಿತು. ಆಗ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 159 ರನ್.
ದಿನದಾಟದ ಅಂತಿಮ ಅವಧಿಯಲ್ಲಿ ಕರ್ನಾಟಕಕ್ಕೆ 6 ವಿಕೆಟ್ ಬೇಕಿತ್ತು. ಮುಂದಿನ 61 ಎಸೆತಗಳಲ್ಲೇ ರೈಲ್ವೇಸ್ ಆಲೌಟ್ ಆಯಿತು. 26 ರನ್‌ಗಳಿಗೆ ಕೊನೆ 6 ವಿಕೆಟ್ ಕಳೆದುಕೊಂಡ ರೈಲ್ವೇಸ್, ಸುಲಭವಾಗಿ ಸೋಲಿಗೆ ಶರಣಾಯಿತು. ಕೊನೆ 6 ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ಸಹ ದಾಖಲಿಸಲಿಲ್ಲ.
24 ಓವರ್ ಬೌಲ್ ಮಾಡಿದ ಕೆ.ಗೌತಮ್, 11 ಮೇಡನ್ ಸಹಿತ ಕೇವಲ 30 ರನ್‌ಗಳಿಗೆ 6 ವಿಕೆಟ್ ಕಿತ್ತರು. ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು. ರೈಲ್ವೇಸ್‌ಗಿದು ಈ ಋುತುವಿನಲ್ಲಿ 3 ಸೋಲು. ತಂಡ ‘ಎ’ ಹಾಗೂ ‘ಬಿ’ ಗುಂಪುಗಳ ಒಟ್ಟಾರೆ ಅಂಕಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದೆ.
ಸ್ಕೋರ್:
ಕರ್ನಾಟಕ 214 ಹಾಗೂ 290/2 ಡಿ.,
ರೈಲ್ವೇಸ್ 143 ಹಾಗೂ 185
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.