
ಮೈಸೂರು[ನ.28]: ಜಗದೀಶ್ ಸುಚಿತ್ ಮಿಂಚಿನ ದಾಳಿಗೆ ತತ್ತರಿಸಿದ ಮಹರಾಷ್ಟ್ರ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 113 ರನ್’ಗಳಿಗೆ ಸರ್ವಪತನ ಕಂಡಿದೆ. ಇನ್ನು ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, 3 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದ್ದು, ಇನ್ನು ಕೇವಲ 43 ರನ್’ಗಳ ಹಿನ್ನಡೆಯಲ್ಲಿದೆ.
ಮೈಸೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಹರಾಷ್ಟ್ರ ತಂಡಕ್ಕೆ ನಾಯಕ ವಿನಯ್ ಕುಮಾರ್ ಆರಂಭದಲ್ಲೇ ಶಾಕ್ ನೀಡಿದರು. ಇದರ ಬೆನ್ನಲ್ಲೇ ಅಭಿಮನ್ಯು ಮಿಥುನ್ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಸ್ವಪ್ನಿಲ್ ಗುಗಾಲೆ ವಿಕೆಟ್ ಕಬಳಿಸುವ ಮೂಲಕ ಮಹರಾಷ್ಟ್ರ ಕೇವಲ 1 ರನ್’ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಋತುರಾಜು ಗಾಯಕ್ವಾಡ್[39] ಹಾಗೂ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರೋಹಿತ್ ಮೋಟ್ವಾನಿ[34] ಕರ್ನಾಟಕ ಬೌಲರ್’ಗಳಿಗೆ ಅಲ್ಪ ಪ್ರತಿರೋಧ ತೋರಿದರು. ತವರಿನ ಮೈದಾನದಲ್ಲಿ ಮಿಂಚಿದ ಎಡಗೈ ಸ್ಪಿನ್ನರ್ ಸುಚಿತ್ ಮಹರಾಷ್ಟ್ರದ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು. ಸುಚಿತ್ ಕೇವಲ 8 ಓವರ್’ಗಳಲ್ಲಿ ಒಂದು ಮೇಡನ್ ಸಹಿತ 26 ರನ್ ನೀಡಿ 4 ವಿಕೆಟ್ ಕಬಳಿಸಿದರು. ಈ ಮೂಲಕ ಮಹರಾಷ್ಟ್ರ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇನ್ನು ವಿನಯ್ ಕುಮಾರ್, ಮಿಥುನ್ ಹಾಗೂ ರೋನಿತ್ ಮೋರೆ ತಲಾ 2 ವಿಕೆಟ್ ಕಬಳಿಸಿದರು.
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 18 ವರ್ಷದ ದೇವ್’ದತ್ ಪಡಿಕ್ಕಲ್ ಬೌಂಡರಿ ಮೂಲಕ ರನ್ ಖಾತೆ ತೆರೆದರಾದರೂ ಅವರ ಆಟ ಕೇವಲ 7 ರನ್’ಗಳಿಗೆ ಸೀಮಿತವಾಯಿತು. ಕುನೈನ್ ಅಬ್ಬಾಸ್ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೃಷ್ಣಮೂರ್ತಿ ಸಿದ್ದಾರ್ಥ್ 11 ರನ್ ಬಾರಿಸಿ ದುಮಾಲ್’ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ಎಚ್ಚರಿಕೆಯ ಆಟವಾಡಿದ ಡಿ. ನಿಶ್ಚಲ್ 101 ಎಸೆತಗಳಲ್ಲಿ 32 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್:
ಮಹರಾಷ್ಟ್ರ: 113/10
ಋತುರಾಜು: 39
ಸುಚಿತ್: 26/4
ಕರ್ನಾಟಕ: 70/3
ಡಿ. ನಿಶ್ಚಲ್: 32*
[*ಮೊದಲ ದಿನದಾಟ ಮುಕ್ತಾಯಕ್ಕೆ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.