
ಆಲೂರು[ಜ.01]: ಆತಿಥೇಯ ಕರ್ನಾಟಕ ತಂಡ, ಛತ್ತೀಸ್‌ಗಢ ವಿರುದ್ಧ ಇಲ್ಲಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ 2ನೇ ದಿನವೂ ಮೇಲುಗೈ ಸಾಧಿಸಿದೆ.
ಮಾಜಿ ನಾಯಕ ಆರ್. ವಿನಯ್ ಕುಮಾರ್ (90) ಮತ್ತು ವೇಗಿ ಅಭಿಮನ್ಯು ಮಿಥುನ್ (26ಕ್ಕೆ 3) 2ನೇ ದಿನದಲ್ಲಿ ರಾಜ್ಯ ತಂಡದ ಮೇಲುಗೈಗೆ ಕಾರಣರಾದರು. ಮೊದಲ ಇನಿಂಗ್ಸ್ ಆರಂಭಿಸಿರುವ ಛತ್ತೀಸ್‌ಗಢ 2ನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 121 ರನ್‌ಗಳಿಸಿದೆ. ಇನ್ನೂ 297 ರನ್‌ಗಳ ಹಿನ್ನಡೆಯಲ್ಲಿದೆ. ಹರ್‌ಪ್ರೀತ್ (53), ಅಮನ್‌ದೀಪ್ (43) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮಿಥುನ್ ಮಿಂಚಿನ ದಾಳಿ: ಮೊದಲ ಇನಿಂಗ್ಸ್ ಆರಂಭಿಸಿದ ಛತ್ತೀಸ್‌ಗಢ ಆರಂಭಿಕ ಆಘಾತ ಅನುಭವಿಸಿತು. 18 ರನ್‌ಗಳಿಸುವಷ್ಟರಲ್ಲಿ ಆರಂಭಿಕ ಅವಿನಾಶ್ ಧಲಿವಾಲ್ (16)ರನ್ನು ಕಳೆದುಕೊಂಡಿತು. ನಂತರ ಅನುಜ್ ತಿವಾರಿ (4), ಮನೋಜ್ ಸಿಂಗ್ (4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. 25 ರನ್‌ಗಳಿಸುವಷ್ಟರಲ್ಲಿ ಛತ್ತೀಸ್‌ಗಢ ಅಗ್ರ ಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕ ಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮುರಿಯದ 4ನೇ ವಿಕೆಟ್‌ಗೆ ಜೊತೆಯಾದ ನಾಯಕ ಹರ್‌ಪ್ರೀತ್, ಅಮನ್‌ದೀಪ್ 96 ರನ್‌ಗಳ ಜೊತೆಯಾಟ ನಿರ್ವಹಿಸಿ ಚೇತರಿಕೆ ನೀಡಿದರು.
10 ರನ್‌ಗಳಿಂದ ವಿನಯ್ ಶತಕ ವಂಚಿತ: ಇದಕ್ಕೂ ಮುನ್ನ ಸೋಮವಾರ 4 ವಿಕೆಟ್‌ಗೆ 273 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿದ ಕರ್ನಾಟಕ 2ನೇ ದಿನದ ಮೊದಲ ಎಸೆತದಲ್ಲೆ ಡಿ. ನಿಶ್ಚಲ್ (107) ವಿಕೆಟ್ ಕಳೆದುಕೊಂಡಿತು. ರನ್‌ಗಳಿಸಲು ಮಧ್ಯಮ ಕ್ರಮಾಂಕದ ಆಟಗಾರರು ಪರದಾಟ ನಡೆಸಿದರು. ವೇಗಿ ಪಂಕಜ್ ದಾಳಿಗೆ ಸಿಲುಕಿದ ರಾಜ್ಯದ ಬ್ಯಾಟ್ಸ್'ಮನ್‌ಗಳು ಪರದಾಡಿದರು. ಕರ್ನಾಟಕ 25 ರನ್‌ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. 297 ರನ್'ಗೆ ಕರ್ನಾಟಕ 8 ವಿಕೆಟ್ ಕಳೆದುಕೊಂಡಿತು. ಈ ವೇಳೆ 9ನೇ ವಿಕೆಟ್‌ಗೆ ಜೊತೆಯಾದ ವಿನಯ್ ಮತ್ತು ಮಿಥುನ್ ಚೇತರಿಕೆ ನೀಡಿದರು. 147 ಎಸೆತಗಳನ್ನು ಎದುರಿಸಿದ ವಿನಯ್ 90 ರನ್‌ಗಳಿಸಿ ಅಜೇಯರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.