11 ದಿನಗಳಲ್ಲಿ 4,800 ಕಿಲೋ ಮೀಟರ್ ಸೈಕ್ಲಿಂಗ್: ಅಮೆರಿಕದ ಅಲ್ಟ್ರಾ ಸೈಕಲ್ ರೇಸಲ್ಲಿ ಬೆಂಗಳೂರಿಗ ಶ್ರೀನಿ ಸಾಧನೆ..!

By Kannadaprabha News  |  First Published Jul 5, 2023, 8:27 AM IST

ಅತ್ಯಂತ ಕಠಿಣ ಸೈಕಲ್ ರೇಸ್‌ಗಳಲ್ಲಿ ಒಂದೆನಿಸಿರುವ ರೇಸ್ ಅಕ್ರಾಸ್ ಅಮೆರಿಕನಲ್ಲಿ ಪಾಲ್ಗೊಂಡ ಶ್ರೀನಿವಾಸ್ ಗೋಕುಲನಾಥ್
ಶ್ರೀನಿವಾಸ್ ಗೋಕುಲನಾಥ್ ಬೆಂಗಳೂರು ಮೂಲದ  ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಏರೋಸ್ಪೇಸ್ ಮೆಡಿಸನ್ ಸ್ಪೆಷಲಿಸ್ಟ್
ಶ್ರೀನಿವಾಸ್‌ ಅವರು ನಿಗದಿತ 4800 ಕಿ.ಮೀ. ದೂರವನ್ನು 11 ದಿನ, 6 ಗಂಟೆಗಳಲ್ಲಿ ಪೂರ್ತಿಗೊಳಿಸಿದರು.


ಬೆಂಗಳೂರು(ಜು.05): ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಏರೋಸ್ಪೇಸ್ ಮೆಡಿಸನ್ ಸ್ಪೆಷಲಿಸ್ಟ್ ಮತ್ತು ಭಾರತದ ಕೆಲವೇ ಅಲ್ಟ್ರಾ ಸೈಕ್ಲಿಸ್ಟ್‍ಗಳಲ್ಲಿ ಒಬ್ಬರಾದ ಬೆಂಗಳೂರು ಮೂಲದ ಶ್ರೀನಿವಾಸ್ ಗೋಕುಲನಾಥ್ ಅವರು ಅತ್ಯಂತ ಕಠಿಣ ಸೈಕಲ್ ರೇಸ್‌ಗಳಲ್ಲಿ ಒಂದೆನಿಸಿರುವ ರೇಸ್ ಅಕ್ರಾಸ್ ಅಮೆರಿಕ (ಆರ್‌ಎಎಎಂ) 2023ರ ಆವೃತ್ತಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ರೇಸ್‌ನಲ್ಲಿ ಶ್ರೀನಿವಾಸ್‌ ಅವರು ನಿಗದಿತ 4800 ಕಿ.ಮೀ. ದೂರವನ್ನು 11 ದಿನ, 6 ಗಂಟೆಗಳಲ್ಲಿ ಪೂರ್ತಿಗೊಳಿಸಿದರು. ಅವರು ಗಂಟೆಗೆ ಸರಾಸರಿ 18.10 ಕಿ.ಮೀ ವೇಗದಲ್ಲಿ ಸೈಕಲ್ ತುಳಿದು ರೇಸ್‌ ಪೂರ್ತಿಗೊಳಿಸಿದರು. 2017ರಲ್ಲಿ ಈ ರೇಸ್‌ ಪೂರ್ತಿಗೊಳಿಸಿದ ಭಾರತದ ಮೊದಲಿಗ ಎನ್ನುವ ದಾಖಲೆಯನ್ನೂ ಬರೆದಿದ್ದರು.

Latest Videos

undefined

ಆರ್‌ಎಎಎಂ ಅಮೆರಿಕದ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಯವರೆಗೂ ನಡೆಯುವ ವಾರ್ಷಿಕ ರೇಸ್‌. 1982ರಲ್ಲಿ ಈ ರೇಸ್‌ ಆರಂಭಗೊಂಡಿತು. ವೈಯಕ್ತಿಕ ವಿಭಾಗದಲ್ಲಿ ಈ ರೇಸ್‌ ಪೂರ್ತಿಗೊಳಿಸಲು 12 ದಿನಗಳ ಕಾಲಾವಕಾಶ ಇರಲಿದೆ. ಮೊದಲ ಆವೃತ್ತಿಯಿಂದ ಈ ವರೆಗೂ ಒಟ್ಟು 370 ಮಂದಿ ಮಾತ್ರ ರೇಸ್‌ ಪೂರ್ತಿಗೊಳಿಸಿದ್ದಾರೆ.

ರಾಜ್ಯ ಫುಟ್ಬಾಲ್ ಸಂಸ್ಥೆ ಬಗ್ಗೆ ಎಐಎಫ್‌ಎಫ್‌ ಮೆಚ್ಚುಗೆ

ಸ್ಯಾಫ್ ಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ)ಯನ್ನು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ(ಎಐಎಫ್‌ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅಭಿನಂದಿಸಿದ್ದಾರೆ. ಮಂಗಳವಾರ ಬೆಂಗಳೂರಲ್ಲೇ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೆಎಸ್‌ಎಫ್‌ಎ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಚೌಬೆ, ಬೆಂಗಳೂರು ಫುಟ್ಬಾಲ್ ಅಭಿಮಾನಿಗಳನ್ನು ಶ್ಲಾಘಿಸಿದರು. ‘ಬಹುತೇಕ ಪಂದ್ಯಗಳಿಗೆ ಕ್ರೀಡಾಂಗಣ ಭರ್ತಿಯಾಗಿತ್ತು. ಇದು ಬಹಳ ಅಪರೂಪ. ಸಾವಿರಾರು ಅಭಿಮಾನಿಗಳು ಟಿಕೆಟ್‌ ಖರೀದಿಸಿ ಪಂದ್ಯ ವೀಕ್ಷಣೆಗೆ ಬಂದಿದ್ದು ಖುಷಿಯ ವಿಷಯ’ ಎಂದರು.

ಭಾರತಕ್ಕೆ 9ನೇ ಸ್ಯಾಫ್ ಕಿರೀಟ:

ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ತನಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಭಾರತ ಮತ್ತೊಮ್ಮೆ‌ ನಿರೂಪಿಸಿದೆ. 14ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್‌ನ ಸಡನ್‌ ಡೆತ್‌ನಲ್ಲಿ (5-4) ಮಣಿಸಿದ ಭಾರತ, ದಾಖಲೆಯ 9ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

13ನೇ ಬಾರಿ ಫೈನಲ್ ಆಡಿದ ಭಾರತ ಅರ್ಹವಾಗಿಯೇ ಸ್ಯಾಫ್ ಕಿರೀಟ ಮುಡಿಗೇರಿಸಿಕೊಂಡಿತು. 1993, 1997, 1999, 2005, 2009, 2011, 2015, 2021ರಲ್ಲೂ ಭಾರತ ಚಾಂಪಿಯನ್‌ ಆಗಿತ್ತು. ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಆಗುವ ಕುವೈತ್ ಕನಸು ನುಚ್ಚುನೂರಾಯಿತು.

ಹೇಗಿತ್ತು ಶೂಟೌಟ್?

ಭಾರತದ ಪರ ಚೆಟ್ರಿ ಗೋಲಿನ ಖಾತೆ ತೆರೆದರು. ಆದರೆ ಕುವೈತ್‌ನ ಮೊದಲ ಅವಕಾಶವನ್ನು ಅಬ್ದುಲ್ಲಾ ವ್ಯರ್ಥ ಮಾಡಿದರು. ಬಳಿಕ ಭಾರತದ ಪರ ಸಂದೇಶ್ ಜಿಂಗನ್, ಚಾಂಗ್ಟೆ ಗೋಲು ಹೊಡೆದರೆ, ಕುವೈತ್‌ ಪರ ಫವಾಜ್, ಅಹ್ಮದ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಆದರೆ ಭಾರತದ 4ನೇ ಪ್ರಯತ್ನದಲ್ಲಿ ಉದಾಂತ್ ಸಿಂಗ್ ಗೋಲು ಗಳಿಸಲು ವಿಫಲರಾದರೆ, ಕುವೈತ್‌ನ ಅಬ್ದುಲ್ ಅಜೀಜ್ ಗೋಲು ಹೊಡೆದರು. 5ನೇ ಪ್ರಯತ್ನದಲ್ಲಿ ಭಾರತದ ಸುಭಾಷಿಶ್, ಕುವೈತ್‌ನ ಶಬೀಬ್ ಗೋಲು ಬಾರಿಸಿದರು. ಹೀಗಾಗಿ ಫಲಿತಾಂಶಕ್ಕಾಗಿ ಸಡನ್‌ ಡೆತ್‌ ಮೊರೆ ಹೋಗಬೇಕಾಯಿತು. ಭಾರತದ ಮಹೇಶ್ ಗೋಲು ಬಾರಿಸಿದರೆ, ಕುವೈತ್‌ನ ನಾಯಕ ಖಾಲಿದ್‌ ಒದ್ದ ಚೆಂಡನ್ನು ತಡೆದ ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಭಾರತವನ್ನು ಗೆಲ್ಲಿಸಿದರು.

ಈಜು: ರಾಜ್ಯದ ಸುವನಾ ರಾಷ್ಟ್ರೀಯ ದಾಖಲೆ

ಹೈದರಾಬಾದ್‌: 76ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನ ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ರಾಜ್ಯದ ಸುವನಾ ಭಾಸ್ಕರ್‌ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದಾರೆ. 29.63 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಗುಜರಾತ್‌ನ ಮಾನಾ ಪಟೇಲ್‌(29.79 ಸೆಕೆಂಡ್‌) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಇನ್ನು ಇದೇ ವಿಭಾಗದಲ್ಲಿ ರಿಧಿಮಾ ಕಂಚು ಗೆದ್ದರೆ, 50 ಮೀ. ಫ್ರೀಸ್ಟೈಲ್‌ನಲ್ಲಿ ನೀನಾ ಕಂಚು ಜಯಿಸಿದರು. ಮಹಿಳೆಯರ 4*100 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ರಾಜ್ಯ ತಂಡ ಬೆಳ್ಳಿ ಜಯಿಸಿತು.

click me!