
ಲಂಡನ್(ಜು.05): ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ವಿಶ್ವ ನಂ.1 ಸ್ಪೇನ್‌ನ ಕಾರ್ಲೊಸ್ ಆಲ್ಕರಜ್, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್ ಕಜಕಸ್ತಾನದ ಎಲೆನಾ ರಬೈಕೆನಾ ಶುಭಾರಂಭ ಮಾಡಿದ್ದಾರೆ.ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಆಲ್ಕರಜ್ ಫ್ರಾನ್ಸ್‌ನ ಜೆರಿಮೆ ಚಾರ್ಡಿ ವಿರುದ್ಧ 6-0, 6-2, 7-5 ನೇರ ಸೆಟ್‌ಗಳಲ್ಲಿ ಗೆದ್ದರು.
ರಬೈಕೆನಾ ಮೊದಲ ಸುತ್ತಿನಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್ ವಿರುದ್ಧ 4-6, 6-1, 6-2 ಸೆಟ್‌ಗಳಲ್ಲಿ ಜಯ ಸಾಧಿಸಿದರು. ಮೊದಲ ಸೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿದರೂ ರಬೈಕೆನಾ ಪಂದ್ಯ ಕೈಚೆಲ್ಲಲಿಲ್ಲ. ಇನ್ನು ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿಯರಲ್ಲಿ ಒಬ್ಬರೆನಿಸಿದ್ದ, 7ನೇ ಶ್ರೇಯಾಂಕಿತೆ ಅಮೆರಿಕದ ಕೊಕೊ ಗಾಫ್ ಮೊದಲ ಸುತ್ತಿನಲ್ಲೇ ಪರಾಭವಗೊಂಡರು. ತಮ್ಮ ದೇಶದವರೇ ಆದ, 2020ರ ಆಸ್ಟ್ರೇಲಿಯನ್ ಓಪನ್ ವಿಜೇತೆ ಸೋಫಿಯಾ ಕೆನಿನ್ ವಿರುದ್ಧ 4-6, 6-4, 2-6 ಸೆಟ್‌ಗಳಲ್ಲಿ ಸೋಲುಂಡರು.
ವೀನಸ್ ಔಟ್: ಮಾಜಿ ಚಾಂಪಿಯನ್, 43 ವರ್ಷದ ವೀನಸ್ ವಿಲಿಯಮ್ಸ್ ಮೊದಲ ಸುತ್ತಿನಲ್ಲೇ ಪರಾಭವಗೊಂಡು ತಮ್ಮ ಅಭಿಯಾನ ಕೊನೆಗೊಳಿಸಿದರು. 24ನೇ ಬಾರಿಗೆ ವಿಂಬಲ್ಡನ್ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದ ಅಮೆರಿಕ ಆಟಗಾರ್ತಿ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ವಿರುದ್ಧ 4-6, 3-6 ನೇರ ಸೆಟ್‌ಗಳಲ್ಲಿ ಸೋಲುಂಡರು.
ವಿಶ್ವ ರ‍್ಯಾಂಕಿಂಗ್: 15ನೇ ಸ್ಥಾನಕ್ಕೆ ಕುಸಿದ ಸಿಂಧು
ನವದೆಹಲಿ: ಇತ್ತೀಚಿನ ಟೂರ್ನಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಅಗ್ರ-10ರಿಂದ ಹೊರಬಿದ್ದಿದ್ದ ಸಿಂಧು ಮಹಿಳಾ ಸಿಂಗಲ್ಸ್‌ನ ನೂತನ ಪಟ್ಟಿಯಲ್ಲಿ ಮತ್ತೆ 3 ಸ್ಥಾನ ಕುಸಿದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ 8ನೇ ಸ್ಥಾನ ಕಾಯ್ದುಕೊಂಡಿದ್ದು, ಲಕ್ಷ್ಯ ಸೇನ್ ಹಾಗೂ ಕಿದಂಬಿ ಶ್ರೀಕಾಂತ್ ಕ್ರಮವಾಗಿ 19, 20ನೇ ಸ್ಥಾನಗಳಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ 3ನೇ ಸ್ಥಾನದಲ್ಲಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ರಾಜ್ಯ ಕೋಚ್‌ಗಳ ಕಿತ್ತಾಟ!
ಬೆಂಗಳೂರು: ಕರ್ನಾಟಕದ ಮಾಜಿ ಅಥ್ಲೀಟ್, ಕೋಚ್ ಬಿಂದು ರಾಣಿ ಹಾಗೂ ಹಿರಿಯ ಕೋಚ್ ಯತೀಶ್ ಕುಮಾರ್‌ರ ನಡುವಿನ ‘ಖೇಲ್ ರತ್ನ ’ ಪ್ರಶಸ್ತಿ ಹಾಗೂ ಪದಕಗಳ ಬಗೆಗಿನ ಜಟಾಪಟಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಕಿತ್ತಾಟ, ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಬಿಂದು ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದು, ಕೋಚ್ ಯತೀಶ್ ಹಾಗೂ ಅವರ ಪತ್ನಿ ಶ್ವೇತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 504(ಅವಮಾನ), 506(ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಯೋಜಕರಿಗೆ ಬಿಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ಅನುಮಾನಿಸಿದ್ದ ಯತೀಶ್, ಇದನ್ನು ವಾಟ್ಸ್‌ಆ್ಯಪ್ ಗುಂಪಿನಲ್ಲಿ ಪ್ರಶ್ನಿಸಿದ್ದರು. ಇದರ ಮುಂದುವರಿದ ಭಾಗವಾಗಿ ಸೋಮವಾರ ಶ್ವೇತಾ, ಕ್ರೀಡಾಂಗಣದಲ್ಲಿ ಬಿಂದು ಅವರಿಗೆ ಚಪ್ಪಲಿ ತೋರಿಸಿ, ಕಳ್ಳತನ ಆರೋಪ ಹೊರಿಸಿ, ನಿಂದಿಸಿದ್ದರು. ಘಟನೆ ವಿಡಿಯೋ ವೈರಲ್ ಆಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.