
ಗ್ರೇಟರ್‌ನೋಯ್ಡಾ(ಅ.13): ಆರಂಭಿಕ ಆರ್. ಸಮರ್ಥ್ (118: 276 10 ಬೌಂಡರಿ) ದಾಖಲಿಸಿದ ಮನೋಜ್ಞ ಶತಕದ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ (74: 168 ಎಸೆತ, 5 ಬೌಂಡರಿ) ಉಪಯುಕ್ತ ಆಟದ ನೆರವಿನಿಂದಾಗಿ ಜಾರ್ಖಂಡ್ ವಿರುದ್ಧದ ಈ ಋುತುವಿನ ತನ್ನ ಮೊದಲ ರಣಜಿ ಅಭಿಯಾನವನ್ನು ಕರ್ನಾಟಕ ಎಚ್ಚರಿಕೆಯೊಂದಿಗೆ ಆರಂಭಿಸಿದೆ.
ಇಲ್ಲಿನ ಗ್ರೇಟರ್ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದ ಮುಕ್ತಾಯಕ್ಕೆ ಕರ್ನಾಟಕ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ ಸುಸ್ಥಿತಿ ಕಾಯ್ದುಕೊಂಡಿತು.
ದಿನದಾಟದ ಅಂತ್ಯಕ್ಕೆ ಸಮರ್ಥ್ ಮತ್ತು ಚೊಚ್ಚಲ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಕೌನಿಯನ್ ಅಬ್ಬಾಸ್ (28) ಔಟಾಗದೆ ಉಳಿದಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಜೋಡಿಯೊಂದಿಗೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರರು ಕೂಡ ಸಮರ್ಥ ಬ್ಯಾಟಿಂಗ್ ಮಾಡುವುದರೊಂದಿಗೆ ತಂಡದ ಮೊತ್ತವನ್ನು ಸವಾಲಿನತ್ತ ಕೊಂಡೊಯ್ಯುವ ವಿಶ್ವಾಸದಲ್ಲಿದ್ದಾರೆ.
ಉತ್ತಪ್ಪ-ಮಯಾಂಕ್ ವೈಫಲ್ಯ
ಬೆಳಗ್ಗೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ 32 ರನ್ ಗಳಿಸುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಮೊದಲಿಗೆ ಮಯಾಂಕ್ ಅಗರ್ವಾಲ್ (15) ವೇಗಿ ಆಶೀಶ್ ಕುಮಾರ್ ಬೌಲಿಂಗ್‌ನಲ್ಲಿ ಸೌರಭ್ ತಿವಾರಿಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ತದನಂತರ ಬಂದ ರಾಬಿನ್ ಉತ್ತಪ್ಪ (2) ಕೂಡ ಇದೇ ಇದೇ ಆಶೀಶ್ ಬೌಲಿಂಗ್‌ನಲ್ಲಿ ಇಶನ್ ಕಿಶನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ದಿನದಾಟದ ಆರಂಭದಲ್ಲಿ ಕರ್ನಾಟಕ ಹಿನ್ನಡೆ ಅನುಭವಿಸಿತು.
ಶತಕದ ಜತೆಯಾಟ
ಈ ಇಬ್ಬರ ನಿರ್ಗಮನದಿಂದಾಗಿ ಜಾರ್ಖಂಡ್ ಮೇಲ್ನೋಟಕ್ಕೆ ಮೇಲುಗೈ ಸಾಧಿಸಿಬಿಟ್ಟಂತೆ ಕಂಡುಬಂದರೂ, ಬಳಿಕ ಜತೆಯಾದ ಆರ್. ಸಮರ್ಥ್ ಮತ್ತು ಕರುಣ್ ನಾಯರ್ ಮೂರನೇ ವಿಕೆಟ್‌ಗೆ ಅಮೋಘ ಜತೆಯಾಟ ನೀಡಿದ್ದು ಆರಂಭಿಕ ಹಿನ್ನಡೆಯನ್ನು ಕರ್ನಾಟಕ ಮೆಟ್ಟಿನಿಲ್ಲಲು ಸಹಕಾರಿಯಾಯಿತು. ಅತ್ಯಂತ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಕರುಣ್ ನಾಯರ್ ಮತ್ತು ಸಮರ್ಥ್ ಜಾರ್ಖಂಡ್ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದರು. ಮೊದಮೊದಲು ವೇಗಿಗಳಿಗೆ ಬಹುವಾಗಿ ಸ್ಪಂದಿಸುತ್ತಿದ್ದ ಪಿಚ್‌ನಲ್ಲಿ ಯಾವುದೇ ಆತುರದ ಹೊಡೆತಗಳಿಗೆ ಮುಂದಾಗದ ಈ ಜೋಡಿ, ಕುಸಿತ ಕಂಡಿದ್ದ ತಂಡಕ್ಕೆ ಚೇತರಿಕೆ ನೀಡಿತು. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ಗೆ ಆಯ್ಕೆಯಾದರೂ, ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಗಳಿಸಲು ವಿಫಲವಾದ ಕರುಣ್ ನಾಯರ್ ಯಶಸ್ವಿ ಅರ್ಧಶತಕದೊಂದಿಗೆ ಈ ಋುತುವಿನ ರಣಜಿ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದರು. ಆದರೆ, ಮಧ್ಯಾಹ್ನದ ಚಹಾ ವಿರಾಮದ ಹೊತ್ತಿಗೆ ದಾಳಿಗಿಳಿದ ಆಶೀಶ್ ಕುಮಾರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಮೂರನೇ ವಿಕೆಟ್ ಪಡೆದರು. ಸಮರ್ಥ್ ಜತೆಗೆ ಕರುಣ್ ಮೂರನೇ ವಿಕೆಟ್‌ಗೆ 155 ರನ್ ಜತೆಯಾಟವಾಡಿದರು.
ಜಾರ್ಖಂಡ್ ಪರ ಆಶೀಶ್ ಕುಮಾರ್ ಒಬ್ಬರನ್ನು ಹೊರತುಪಡಿಸಿದರೆ ಮಿಕ್ಕವರು ವಿಕೆಟ್ ಪಡೆಯುವಲ್ಲಿ ಸಫಲವಾಗಲಿಲ್ಲ.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್
90 ಓವರ್‌ಗಳಲ್ಲಿ 3 ವಿಕೆಟ್‌ಗೆ 248
ಆರ್. ಸಮಥ್‌ರ್ ಬ್ಯಾಟಿಂಗ್ 118
ಮಯಾಂಕ್ ಅಗರ್ವಾಲ್ ಸಿ ಸೌರಭ್ ಬಿ ಆಶೀಶ್ 15
ರಾಬಿನ್ ಉತ್ತಪ್ಪ ಸಿ ಇಶನ್ ಬಿ ಆಶೀಶ್ ಕುಮಾರ್ 02
ಕರುಣ್ ನಾಯರ್ ಬಿ ಆಶೀಶ್ ಕುಮಾರ್ 74
ಕೌನಿಯನ್ ಅಬ್ಬಾಸ್ ಬ್ಯಾಟಿಂಗ್ 28
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.