ದೇಶ ಕಾಯಲು ಸೈ, ಕಬಡ್ಡಿಗೂ ಜೈ

Published : Sep 12, 2017, 06:37 PM ISTUpdated : Apr 11, 2018, 01:13 PM IST
ದೇಶ ಕಾಯಲು ಸೈ, ಕಬಡ್ಡಿಗೂ ಜೈ

ಸಾರಾಂಶ

ಕಡುಬಡತನದಲ್ಲಿ ಬೆಳೆದು ಭಾರತೀಯ ಸೇನೆಗೆ ಸೇರಿದ ಗುರುನಾಥ್ ಈಗ ಪುಣೆ ತಂಡದ ಭರವಸೆಯ ರೈಡರ್

ಪ್ರೊ ಕಬಡ್ಡಿ ಲೀಗ್ ಅನೇಕ ಹೊಸ ಪ್ರತಿಭೆಗಳ ಉದಯಕ್ಕೆ ಸಾಕ್ಷಿಯಾಗುತ್ತಿದೆ. ಕಡುಬಡತನದಿಂದ ಬಂದು ದೇಶಾದ್ಯಂತ ಸುದ್ದಿ ಮಾಡಿದ ಅನೇಕ ಆಟಗಾರರಿದ್ದಾರೆ. ಈ ಸಾಲಿಗೆ ಸೇರಿರುವ ಹೊಸ ಪ್ರತಿಭೆ ಪುಣೇರಿ ಪಲ್ಟಾನ್‌ನ ಯುವ ರೈಡರ್ ಗುರುನಾಥ್ ಮೋರೆ.

ಇತರರ ಹೊಲದಲ್ಲಿ ಕೆಲಸ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಲಾಕುಡ್ವಾಡಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಗುರುನಾಥ್ ಬಾಬುರಾವ್ ಮೋರೆ ರೈತ ಕುಟುಂಬದಿಂದ ಬಂದ ಪ್ರತಿಭೆ. ಜೀವನಕ್ಕಾಗಿ 4 ಗುಂಟೆ ಜಮೀನನ್ನು ನಂಬಿಕೊಂಡಿದ್ದ ಸಣ್ಣ ಕುಟುಂಬ.

ಊರಿನಲ್ಲಿ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಹೊಟ್ಟೆ ಪಾಡು ನೋಡಿಕೊಳ್ಳುತ್ತಿದ್ದ ಗುರುನಾಥ್‌ಗೆ ಚಿಕ್ಕಂದಿನಿಂದಲೂ ಕಬಡ್ಡಿ ಮೇಲೆ ಅಪಾರ ಆಸಕ್ತಿ. ಗುರುನಾಥ್‌ಗೆ ದೇಶ ಕಾಯುವುದು ಕಬಡ್ಡಿಯಷ್ಟೇ ಇಷ್ಟ. ಹೀಗಾಗೇ ಭಾರತೀಯ ಸೇನೆಗೆ ಗುರುನಾಥ್ ಸೇರಿಕೊಂಡರು.

ಆರ್ಮಿ ತಂಡದಲ್ಲಿ ಮಿಂಚು: ಕಳೆದ 5 ವರ್ಷಗಳಿಂದ ಭಾರತೀಯ ಸೇನೆಯಲ್ಲಿರುವ ಗುರುನಾಥ್ ಸದ್ಯ ಪಂಜಾಬ್‌ನ ಪಟಿಯಾಲದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ಅಹಮದ್‌ನಗರ್, ಭೋಪಾಲ್ ಹೀಗೆ ವಿವಿಧ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ರಾಜಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಗ್ರೀನ್ ಆರ್ಮಿ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಗುರುನಾಥ್, ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ಅವಕಾಶ ಪಡೆದರು.

ಊರಲ್ಲಿ ಪೋಸ್ಟರ್ ಅಂಟಿಸಿದ್ದರು: ಗುರುನಾಥ್ ದೇಶ ಕಾಯುವ ಹೆಮ್ಮೆಯ ಕೆಲಸ ಮಾಡುತ್ತಿರುವುದು ಅವರ ಊರಿನ ಜನಕ್ಕೆ ಎಷ್ಟು ಖುಷಿ ನೀಡಿದೆಯೋ, ಅವರು ಪ್ರೊ ಕಬಡ್ಡಿಗೆ ಆಯ್ಕೆಯಾದಾಗ ಜನ ಅದಕ್ಕಿಂತ ಹೆಚ್ಚು ಸಂತಸ ಪಟ್ಟಿದ್ದರಂತೆ.

‘ಕೇವಲ ನನ್ನ ಹಳ್ಳಿಯಲ್ಲಿ ಮಾತ್ರವಲ್ಲ, ಸುತ್ತಮುತ್ತಲಿನ ಹಳ್ಳಿಯವರು ಸಹ ಈಗ ನನ್ನ ಬಗ್ಗೆ ವಿಚಾರಿಸುತ್ತಾರೆ ಎಂದು ತಿಳಿದುಕೊಂಡಿದ್ದೇನೆ. ನಾನು ಪುಣೆ ತಂಡಕ್ಕೆ ಆಯ್ಕೆಯಾದಾಗ ಹಳ್ಳಿಯಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ನನಗೆ ಶುಭ ಕೋರಿದ್ದರು’ ಎಂದು ಗುರುನಾಥ್ ‘ಕನ್ನಡಪ್ರಭ’ದೊಂದಿಗೆ ತಮ್ಮ ಸಂತಸ ಹಂಚಿಕೊಂಡರು.

ಸೇನೆಯಲ್ಲಿರುವ ಕಾರಣ ಗುರುನಾಥ್ ಹೆಚ್ಚು ಫಿಟ್ ಇದ್ದಾರೆ. ಜತೆಗೆ ಸೇನೆಯಲ್ಲಿ ನಡೆಸುವ ಫಿಟ್ನೆಸ್ ಕಸರತ್ತುಗಳನ್ನು ಪ್ರೊ ಕಬಡ್ಡಿ ವೇಳೆಯೂ ಗುರುನಾಥ್ ಮುಂದುವರಿಸಿದ್ದಾರೆ. ಆಕರ್ಷಕ ರೈಡಿಂಗ್ ಅಲ್ಲದೇ ಡಿಫೆಂಡರ್ ಆಗಿಯೂ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿರುವ ಗುರುನಾಥ್ ಮುಂದಿನ ಆವೃತ್ತಿಗಳಲ್ಲಿ ತಾರಾ ಆಟಗಾರನಾಗಿ ಬೆಳೆಯುವ ಗುರಿ ಹೊಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!